Share this news

ಮಂಗಳೂರು: ಹಾಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ತೆರವಾದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಭಂಡಾರಿ ಬೊಟ್ಟಿಯಾಡಿ ಅವರನ್ನು ಅಚ್ಚರಿಯೆಂಬಂತೆ ಘೋಷಣೆ ಮಾಡಲಾಗಿದೆ.

ಯುವಮೋರ್ಚಾ ಜಿಲ್ಲಾಧ್ಯಕ್ಷನಾಗಿ ಮಿಂಚಿದ ಇವರು ಪರಿವಾರ ಸಂಘಟನೆಯಲ್ಲಿ ಮುಂಚೂಣಿಯ ನಾಯಕನಾಗಿ ಸೇವೆ ಸಲ್ಲಿಸಿದ್ದಾರೆ. ಅತೀ ಕಡಿಮೆ ಜನಸಂಖ್ಯೆ ಇರುವ ಭಂಡಾರಿ ಸಮುದಾಯವನ್ನು ಗುರುತಿಸಿ ಈ ಬಾರಿ ಬಿಜೆಪಿ ಟಿಕೆಟ್ ‌ನೀಡುವ ಮೂಲಕ ಕೆಲ ಸಮುದಾಯಕ್ಕೆ ಮನ್ನಣೆ ನೀಡಿರುವ ಬಿಜೆಪಿ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಪ್ರಸ್ತುತ ದಿನಗಳಲ್ಲಿ ರಾಜಕೀಯ ಪಕ್ಷಗಳು ಅಭ್ಯರ್ಥಿಯ ಆಯ್ಕೆಯ ಸಂದರ್ಭದಲ್ಲಿ ಜಾತಿಗಳನ್ನು ನೋಡಿಕೊಂಡು ದೊಡ್ಡ ಸಮುದಾಯಗಳಿಗೆ ಮಣೆ ಹಾಕುತ್ತಿದೆ ಎಂಬ ಆರೋಪ ಕೇಳಿ ಬರುತ್ತಿತ್ತು. ಆದರೆ ಪ್ರಸ್ತುತ ಬಿಜೆಪಿಯು ಈ ಅಚ್ಚರಿಯ ಆಯ್ಕೆಯಿಂದ ಅಂತಹದೊಂದು ಆರೋಪಕ್ಕೆ ತಕ್ಕ ಉತ್ತರ ನೀಡಿದಂತಾಗಿದೆ. ಘಟಾನುಘಟಿ ಆಕಾಂಕ್ಷಿಗಳ ನಡುವೆ ಸಣ್ಣ ಸಮುದಾಯದ ಕಿಶೋರ್ ಕುಮಾರ್ ಗೆ ಅವಕಾಶ ಒಲಿದಿದೆ.

ಈ ಬಾರಿಯ MLC ಉಪ ಚುನಾವಣೆಯಲ್ಲಿ ಕರಾವಳಿ ಭಾಗದ ಪ್ರಬಲ ಸಮುದಾಯಗಳಾದ ಬಂಟ ಹಾಗೂ ಬಿಲ್ಲವ ಸಮಾಜವನ್ನು ಕೈಬಿಟ್ಟು ಸಣ್ಣ ಸಮುದಾಯದ ಅಭ್ಯರ್ಥಿ ಘೋಷಿಸಿ ಹೊಸ ಪ್ರಯೋಗಕ್ಕೆ ಮುಂದಾಗಿರುವುದು ವಿಶೇಷ.
ಪ್ರಮುಖವಾಗಿ ಬಂಟ ಸಮುದಾಯದ ನಳಿನ್ ಕುಮಾರ್ ಕಟೀಲು ಹಾಗೂ ಮೊಗವೀರ ಸಮಾಜದ ಪ್ರಮೋದ್ ಮದ್ವರಾಜ್, ಬಿಲ್ಲವ ಸಮುದಾಯದ ಸತೀಶ್ ಸುವರ್ಣ ಹಾಗೂ ಗೀತಾಂಜಲಿ ಸುವರ್ಣ ಅವರ ಹೆಸರುಗಳು ಕೇಳಿ ಬಂದಿತ್ತು. ಆದರೆ ಇದೀಗ ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿ ಅಖಾಡಕ್ಕಿಳಿಸಿದ್ದು ತೀವ್ರ ಕುತೂಹಲ ಕೆರಳಿಸಿದೆ

 

 

Leave a Reply

Your email address will not be published. Required fields are marked *