ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಕಾಲೇಜೊಂದರ ವಿದ್ಯಾರ್ಥಿನಿಯ ಮೇಲೆ ಅದೇ ಕಾಲೇಜಿನ ಇಬ್ಬರು ಉಪನ್ಯಾಸಕರು ಹಾಗೂ ಮತ್ತೋರ್ವ ವಿದ್ಯಾರ್ಥಿ ಸೇರಿ ಮೂವರು ನಿರಂತರ ಅತ್ಯಾಚಾರ ಎಸಗಿದ್ದ ಆರೋಪದಲ್ಲಿ ಬೆಂಗಳೂರಿನ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಅತ್ಯಾಚಾರ ಪ್ರಕರಣದ ಆರೋಪಿಗಳಾದ ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ,ಜೀವಶಾಸ್ತ್ರ ಉಪನ್ಯಾಕ ಸಂದೀಪ್ ಹಾಗೂ ಅವರ ಗೆಳೆಯ ಅನೂಪ್ ಎಂಬುವರನ್ನು ಬಂಧಿಸಲಾಗಿದೆ.
ಉಪನ್ಯಾಸಕ ನರೇಂದ್ರ ಎಂಬಾತ ನೋಟ್ಸ್ ನೀಡುವ ನೆಪದಲ್ಲಿ ವಿದ್ಯಾರ್ಥಿನಿ ಜೊತೆಯಲ್ಲಿ ಮೊಬೈಲ್ ನಲ್ಲಿ ಚಾಟ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಜೊತೆ ಸಲುಗೆ ಬೆಳೆಸಿದ್ದ ಉಪನ್ಯಾಸಕ, ಆಕೆ ಬೆಂಗಳೂರಿಗೆ ಬಂದ ನಂತರವೂ ಚಾಟ್ ಮಾಡುವುದು ಮುಂದುವರಿಸಿದ್ದ. ನೋಟ್ಸ್ ನೀಡುವ ನೆಪದಲ್ಲಿ ಮಾರತಹಳ್ಳಿಯ ಗೆಳೆಯನ ರೂಮಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಯಾರಿಗೂ ಈ ವಿಷಯ ತಿಳಿಸಬಾರದೆಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಉಪನ್ಯಾಸಕ ನರೇಂದ್ರ ಅತ್ಯಾಚಾರ ಎಸಗಿದ ಬಳಿಕ ಉಪನ್ಯಾಸಕ ಸಂದೀಪ್ ಕೂಡ ಯುವತಿಯ ಜತೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದ,ಆದರೆ ಇದಕ್ಕೆ ಯುವತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಳು. ಆಗ ಆತ, ನರೇಂದ್ರನ ಜೊತೆ ಇರುವ ಫೋಟೋ, ವಿಡಿಯೋ ನನ್ನ ಬಳಿ ಇದೆ. ವೈರಲ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಿದ್ದ.ಬಳಿಕ ಸಂದೀಪ್ ರೂಮ್‌ಮೇಟ್ ಅನೂಪ್ ಕೂಡ ವಿದ್ಯಾರ್ಥಿನಿ ಜತೆ, ನೀನು ನನ್ನ ರೂಮಿಗೆ ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನನ್ನ ರೂಮಿನಲ್ಲಿ ಸಿಸಿಟಿವಿ ಇದೆ ಎಂದು ಬೆದರಿಸಿ ಅತ್ಯಾಚಾರ ಮಾಡಿರುವುದಾಗಿ ಆರೋಪಿಸಲಾಗಿದೆ.
ಈ ಘಟನೆಯ ಬಳಿಕ ವಿದ್ಯಾರ್ಥಿನಿಗೆ ಆರೋಪಿಗಳು ಕಿರುಕುಳ ಮುಂದುವರಿಸಿದಾಗ ಪೋಷಕರಲ್ಲಿ ಈ ಘಟನೆಯ ಕುರಿತು ಹೇಳಿದ್ದಾಳೆ. ನಂತರ ಆಕೆಯನ್ನು ಮಹಿಳಾ ಆಯೋಗಕ್ಕೆ ಕರೆದುಕೊಂಡು ಹೋಗಿದ್ದು, ಆಕೆಗೆ ಕೌನ್ಸಲಿಂಗ್ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ದೂರಿನ ಆಧಾರದಲ್ಲಿ ಮಾರತಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.