ಮೂಡುಬಿದಿರೆ :ಕಳೆದ 43 ವರುಷಗಳಿಂದ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವ ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು 2023ರ ಸಾಲಿನ ಪ್ರಶಸ್ತಿಗಳನ್ನು ನಿರ್ಣಯಿಸಿದ್ದು ಆಗುಂಬೆ ಎಸ್. ನಟರಾಜ್ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಮತ್ತು ಶ್ರೀಧರ ಬನವಾಸಿ ಅವರಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯನ್ನು ಘೋಷಿಸಿದೆ.
ವರ್ಧಮಾನ ಸಾಹಿತ್ಯ ಪ್ರಶಸ್ತಿಯು ರೂ.25000 ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದ್ದರೆ ವರ್ಧಮಾನ ಉದಯೋನ್ಮುಖ ಪ್ರಶಸ್ತಿಯು ರೂ.15000 ಗೌರವ ಸಂಭಾವನೆ, ತಾಮ್ರ ಪತ್ರದ ಜೊತೆ ಸನ್ಮಾನವನ್ನೂ ಒಳಗೊಂಡಿವೆ.
ಪೀಠದ ಉಪಾಧ್ಯಕ್ಷರಾದ ಡಾ. ಪುಂಡಿಕಾÊ ಗಣಪಯ್ಯ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ವರ್ಧಮಾನ ಪ್ರಶಸ್ತಿ ಪೀಠದ ಮಹಾಸಭೆಯಲ್ಲಿ ತೀರ್ಪುಗಾರರಾದ ವಿಮರ್ಶಕ ಡಾ.ಬಿ.ಜನಾರ್ದನ ಭಟ್, ಪ್ರಾಧ್ಯಾಪಕ ಪ್ರೊ| ಬಿ.ಪಿ.ಸಂಪತ್ ಕುಮಾರ್ ಮತ್ತು ವಿಮರ್ಶಕ ಬೆಳಗೋಡು ರಮೇಶ ಭಟ್ ಅವರುಗಳುಳ್ಳ ತ್ರಿಸದಸ್ಯ ಸಮಿತಿಯು ನೀಡಿದ ಶಿಫಾರಸ್ಸಿನ ಆಧಾರದಲ್ಲಿ ಪ್ರಶಸ್ತಿಗಳನ್ನು ನಿರ್ಣಯಿಸಲಾಗಿದೆ.
ಮೂಡುಬಿದಿರೆಯ ಸಮಾಜಮಂದಿರ ಸಭಾ (ರಿ.) ಸಪ್ಟಂಬರ್ ತಿಂಗಳಲ್ಲಿ ನಡೆಸುವ ದಸರಾ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪೀಠದ ಪ್ರಧಾನ ನಿರ್ದೇಶಕ ಡಾ.ನಾ.ಮೊಗಸಾಲೆ ಅವರು ತಿಳಿಸಿದ್ದಾರೆ.