ಬೆಂಗಳೂರು :ಕರ್ನಾಟಕದಲ್ಲಿ ಮೂರು ಕ್ಷೇತ್ರಗಳ ಉಪಚುನಾವಣೆ ಸಾಕಷ್ಟು ಕುತುಹಲ ಮೂಡಿಸಿವೆ. ಅದರಲ್ಲಂತೂ ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಸವಾಲಾಗಿ ಪರಿಣಮಿಸಿದೆ. ಮಾಜಿ ಎಂಎಲ್ಸಿ ಸಿಪಿ ಯೋಗೇಶ್ವರ್ ಬಿಜೆಪಿಗೆ ರಾಜಿನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಇಂದು (ಅ.24) ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರು ಸಿಪಿ ಯೋಗೇಶ್ವರ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.ಈ ಮೂಲಕ ಯೋಗೇಶ್ವರ್, ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ನಿಂದ ಕಣಕ್ಕಿಳಿಯುವುದು ಖಚಿತವಾಗಿದೆ.
ಬಿಜೆಪಿ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ಯೋಗೇಶ್ವರ್ ರಾಜೀನಾಮೆ ನೀಡಿದ್ದಾರೆ. ವಾಟ್ಸಾಪ್ ಮೂಲಕ ರಾಜೀನಾಮೆ ಪತ್ರವನ್ನು ರವಾನಿಸಿದ್ದು, ಈ ದಿನ ನಾನು ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ. ದಯವಿಟ್ಟು ನನ್ನ ರಾಜೀನಾಮೆ ಸ್ವೀಕರಿಸಬೇಕೆಂದು ಕೋರುತ್ತೇನೆ. ಇಲ್ಲಿಯವರೆಗೆ ನನಗೆ ತಾವು ನೀಡಿದ ಸಹಕಾರಕ್ಕಾಗಿ ವಂದನೆಗಳು ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಬಳಿಕ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು.
ಯಾವಾಗ ಬಿಜೆಪಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ರೋ ಅಂದಿನಿಂದ ಸಿಪಿ ಯೋಗೇಶ್ವರ್ ಅವರನ್ನು ಸೆಳೆಯಲು ಕಾಂಗ್ರೆಸ್ ಕಸರತ್ತು ನಡೆಸಿತ್ತು. ಯೋಗೇಶ್ವರ್ ಅವರನ್ಜ ಕಾಂಗ್ರೆಸ್ಗೆ ಕರೆತರುವ ಜವಾಬ್ದಾರಿಯನ್ನು ಕದಲೂರು ಉದಯ್ ಗೌಡ, ಮತ್ತು ಮಾಗಡಿ ಶಾಸಕ ಬಾಲಕೃಷ್ಣ ಹೆಗಲಿಗೆ ಹಾಕಲಾಗಿತ್ತು. ಯೋಗೇಶ್ವರ್ ಗ್ರೀನ್ ಸಿಗ್ನಲ್ ನೀಡಿದ್ದರೆ ನಿನ್ನೆ (ಅಕ್ಟೋಬರ್ 22) ಕಾಂಗ್ರೆಸ್ ಸೇರ್ಪಡೆ ಆಗಬೇಕಿತ್ತು. ಆದ್ರೆ, ಕುಮಾರಸ್ವಾಮಿ ಅಭ್ಯರ್ಥಿ ಘೋಷಣೆ ಮಾಡದಿದ್ದರಿಂದ ಬಿಜೆಪಿ ಟಿಕೆಟ್ ಸಿಗಬಹುದು ಎಂದು ಯೋಗೇಶ್ವರ್ ಕಾದು ಕುಳಿತ್ತಿದ್ದರು.
ಆದ್ರೆ, ಬಿಜೆಪಿ ಟಿಕೆಟ್ ಘೋಷಣೆ ಮಾಡದಿದ್ದರಿಂದ ಸಿಪಿ ಯೋಗೇಶ್ವರ್ ನಿನ್ನೆ ರಾತ್ರಿಯೇ ಕಾಂಗ್ರೆಸ್ ಸೇರ್ಪಡೆಗೆ ಒಪ್ಪಿಗೆ ಸೂಚಿಸಿದ್ದು, ಇಂದು (ಅಕ್ಟೋಬರ್ 23) ನೇರವಾಗಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಬಳಿಕ ಸಿದ್ದರಾಮಯ್ಯನವರನ್ನು ಕಂಡು ಮಾತು ಕತೆ ನಡೆಸಿ ಬಳಿಕ ಕಾಂಗ್ರೆಸ್ ಸೇರ್ಪಡೆಯಾದರು.
ಇದರೊಂದಿಗೆ ಚನ್ನಪಟ್ಟಣ ಉಪಚುನಾವಣೆ ಕದನ ಮತ್ತಷ್ಟು ರಂಗೇರಿದ್ದು, ಈಗ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಯಾರು ಎನ್ನುವುದೇ ಕುತೂಹಲ ಮೂಡಿಸಿದೆ.