ನವದೆಹಲಿ: ಕಳೆದ ವರ್ಷ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ಅಕ್ರಮ ಸೈಟ್ ಹಂಚಿಕೆ ಪ್ರಕರಣದ ಕುರಿತು ಸಿಎಂ ಸಿದ್ಧರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ವಿರುದ್ಧ ಜಾರಿ ನಿರ್ದೇಶನಾಲಯವು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಸುಪ್ರೀಂಕೋರ್ಟ್`ನಲ್ಲಿ ಸೋಮವಾರ ಇಡಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ರಾಜಕೀಯಕ್ಕಾಗಿ ಇಡಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿ ಅರ್ಜಿಯನ್ನು ವಜಾ ಗೊಳಿಸಿದ್ದು, ಇದರಿಂದ ಸಿಎಂ ಪತ್ನಿ ಪಾರ್ವತಿ ಹಾಗು ಸಚಿವ ಭೈರತಿ ಸುರೇಶ್ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ವಿಚಾರಣೆಯ ವೇಳೆ ಕೇಂದ್ರ ಸರ್ಕಾರವನ್ನು ರಾಟೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಇಡಿಯನ್ನು ರಾಜಕೀಯ ಹೋರಾಟಕ್ಕೆ ಬಳಸಿಕೊಳ್ಳಬೇಡಿ ರಾಜಕೀಯ ಹೋರಾಟ ಚುನಾವಣೆ ಕಣದಲ್ಲಿರಲಿ ಎಂದು ಕೇಂದ್ರ ಸರ್ಕಾರ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ಹೊರಹಾಕಿದ್ದು, ದಯವಿಟ್ಟು ನನ್ನ ಬಾಯಿಯನ್ನು ತೆರೆಯುವಂತೆ ಮಾಡಬೇಡಿ ಬಾಯಿ ತೆರೆದರೆ ಕಠಿಣ ಟೀಕೆಗಳನ್ನು ನೀವು ಎದುರಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸಿಜೆಐ ಬಿ.ಆರ್ ಗವಾಯಿ ಇಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ಗೆಗೆ ಇಡಿ ನೀಡಿದ್ದ ಸಮನ್ಸ್‌ಗೆ ತಡೆಯಾಜ್ಞೆ ನೀಡಿದ್ದ ಕರ್ನಾಟಕ ಹೈಕೋರ್ಟ್ ಅಂತಿಮವಾಗಿ 2025ರ ಮಾರ್ಚ್ನಲ್ಲಿ ಅದನ್ನು ರದ್ದುಗೊಳಿಸಿತ್ತು. ಇಡಿ ಜಾರಿಗೊಳಿಸಿದ್ದ ಸಮನ್ಸ್ ಪ್ರಶ್ನಿಸಿ ಸಿಎಂ ಪತ್ನಿ ಹಾಗೂ ಬೈರತಿ ಸುರೇಶ್ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳ ಕುರಿತು ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠದ ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಇಡಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.