ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) 50-50 ನಿವೇಶನ ಹಂಚಿಕೆ ಹಗರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದೀಗ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ನಿವೇಶನಗಳು ಮಂಜೂರಾಗಿತ್ತು ಎನ್ನಲಾಗಿರುವ ಪಟ್ಟಿ ವೈರಲ್ ಆಗಿದೆ.
ವೈರಲ್ ಆದ ನಿವೇಶನ ಹಂಚಿಕೆ ಪಟ್ಟಿಯಲ್ಲಿ ಬರೊಬ್ಬರಿ 928 ನಿವೇಶಗಳ ವಿವರ ಇದೆ. ಅದರಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಪಡೆದ 14 ನಿವೇಶನಗಳ ವಿವರ ಇದೆ. ಜೊತೆಗೆ ಸಿದ್ದರಾಮಯ್ಯ ಆಪ್ತ ಹಿನ್‌ಕಲ್ ಪಾಪಣ್ಣ ಸೇರಿದಂತೆ ಹಲವರು 50:50 ಅನುಪಾತದಲ್ಲಿ ಪಡೆದಿರುವ ಸೈಟ್‌ಗಳ ವಿವರ ಕೂಡ ಇದೆ.
ಮೂಡಾ 241 ನಿವೇಶನ ಮಂಜೂರು ಮಾಡಿತ್ತು. 241 ನಿವೇಶನಗಳಲ್ಲಿ ಅಬ್ದುಲ್ ವಾಜಿದ್ ಎನ್ನುವ ಒಂದೇ ಹೆಸರಿಗೆ 26 ನಿವೇಶನ ಮಂಜೂರು ಮಾಡಲಾಗಿತ್ತು. ಯಾವತ್ತೋ ವಶಪಡಿಸಿಕೊಂಡ ಭೂಮಿಗಳಿಗೆ 2020 ರಿಂದ 2023ರ ಅವಧಿಯಲ್ಲಿ ಆಯುಕ್ತರ ತೀರ್ಮಾನದಂತೆ ಸೈಟ್ ಹಂಚಿಕೆ ಮಾಡಲಾಗಿತ್ತು ಎನ್ನುವ ಮಾಹಿತಿ ಲಭಿಸಿತ್ತು.
ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿದ್ದ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಜಾಗವನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದಾನ ಪತ್ರದ ಮೂಲಕ ಅವರ ಸಹೋದರ ಕೊಟ್ಟಿದ್ದರು. ಇದು ಒಟ್ಟು 1,48,104 ಚದರ ಅಡಿ ಜಾಗ ಇತ್ತು. ಅದರ ಬದಲಿಗೆ ಮುಡಾ 2021ರಲ್ಲಿ ಪಾರ್ವತಿ ಅವರಿಗೆ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ 38,284 ಚದರ ಅಡಿ ಜಾಗ ಅಂದರೆ 14 ನಿವೇಶನ ಕೊಟ್ಟಿದ್ದಾರೆ ಇದು ಈಗ ಚರ್ಚೆಗೆ ಕಾರಣವಾಗಿದೆ. ವಿಜಯನಗರ ಬಡಾವಣೆಯಲ್ಲಿ 14 ನಿವೇಶನ ಪತ್ನಿ ಪಾರ್ವತಿ ಅವರಿಗೆ ಮಂಜೂರು ಆಗಲು, ಸಿದ್ದರಾಮಯ್ಯ ಅವರು ಪ್ರಭಾವ ಬೀರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.