ಬೆಂಗಳೂರು: ಮುಡಾ ಹಗರಣದ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ರದ್ದು ಕೋರಿರುವ ಅರ್ಜಿ ವಿಚಾರಣೆ ಇಂದು ಮಧ್ಯಾಹ್ನ 2:30 ಕ್ಕೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನ್ಯಾಯಪೀಠದಲ್ಲಿ ಇಂದು ವಿಚಾರಣೆಗೆ ಬರಲಿದೆ. ಮೂರು ಬಾರಿ ವಿಚಾರಣೆ ಮುಂದೂಡಿಕೆಯಾಗಿದ್ದು, ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿಯನ್ನು ಹೈಕೋರ್ಟ್ ಎತ್ತಿಹಿಡಿಯುತ್ತದೆಯೇ, ಅಥವಾ ರದ್ದು ಮಾಡುತ್ತದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಮುಡಾ ಹಗರಣದಲ್ಲಿ ಕಾಂಗ್ರೆಸ್ ತಳಮಳ, ಆತಂಕ, ಏನಾಗುತ್ತದೆಯೋ ಏನೋ ಎಂಬ ಗೊಂದಲ ಮುಂದುವರಿದಿದೆ. ಪ್ರತಿಭಟನೆ ಮಾಡಿದ್ದಾಗಿದೆ, ರಾಜಭವನ ಚಲೋ ಕೈಗೊಂಡು ಕಹಳೆ ಮೊಳಗಿಸಿದ್ದಾಗಿದೆ. ಇದೀಗ ಕಾನೂನು ಸಮರ ಕುತೂಹಲದ ಘಟ್ಟಕ್ಕೆ ತಲುಪಿದೆ. ಇಂದು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು, ಪ್ರಕರಣ ಕುತೂಹಲದ ಘಟ್ಟ ತಲುಪಿದೆ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಿಂದ 14 ಸೈಟ್‌ಗಳನ್ನು ಅಕ್ರಮವಾಗಿ ಪಡೆದ ಆರೋಪ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ತಂದಿಟ್ಟಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ರದ್ದು ಕೋರಿ ಸಿಎಂ ಕಾನೂನು ಸಮರ ನಡೆಸಿದ್ದಾರೆ. ಹೈಕೋರ್ಟ್ನಲ್ಲಿ ಬಿರುಸಿನ ವಾದ ಪ್ರತಿವಾದಗಳು ನಡೆಯುತ್ತಿದ್ದು ಈಗಾಗಲೇ 3 ಬಾರಿ ವಿಚಾರಣೆ ಮುಂದೂಡಿಕೆಯಾಗಿದೆ. ಇಂದು ಮಧ್ಯಾಹ್ನ 2.30ಕ್ಕೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠದಲ್ಲಿ ಮತ್ತೆ ವಿಚಾರಣೆ ಮುದುವರಿಯಲಿದೆ. ಎಲ್ಲರ ಚಿತ್ತ ಹೈಕೋರ್ಟ್ನತ್ತ ನೆಟ್ಟಿದೆ.
ಸಿಎಂ ಸಿದ್ದರಾಮಯ್ಯ ಪರ ಅಭಿಷೇಕ್ ಮನು ಸಿಂಘ್ವಿ, ರಾಜ್ಯಪಾಲರ ಕಾರ್ಯದರ್ಶಿ ಪರ ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರವರು ವಾದ ಮಂಡಿಸಲಿದ್ದಾರೆ. ಇಂದು ಕೂಡ ವಾದ ಪ್ರತಿವಾದ ಹೈವೋಲ್ಟೇಜ್ ಸೃಷ್ಟಿಸುವ ಸಾಧ್ಯತೆಯಿದೆ. ಆಗಸ್ಟ್ 31ರಂದು ನಡೆದಿದ್ದ ವಿಚಾರಣೆಯಲ್ಲಿ ಎರಡು ಕಡೆಯ ವಕೀಲರು ಹಲವು ಅಂಶಗಳನ್ನು ಮುಂದಿಟ್ಟು ವಾದ ಪ್ರತಿವಾದ ನಡೆಸಿದ್ದರು.