ಹೆಬ್ರಿ: ಉಕ್ಕಿ ಹರಿಯುತ್ತಿದ್ದ ಹೊಳೆ ದಾಟುತ್ತಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ತಿಂಗಳೆ ಉಗ್ರಾಣಿಬೆಟ್ಟು ಎಂಬಲ್ಲಿ ಗುರುವಾರ ಸಂಭವಿಸಿದೆ. ಮೂಲತಃ ತುಮಕೂರು ಜಿಲ್ಲೆಯ ಪ್ರಸ್ತುತ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ತಿಂಗಳೆ ಉಗ್ರಾಣಿಬೆಟ್ಟು ಎಂಬಲ್ಲಿ ವಾಸವಾಗಿರುವ ಆನಂದ ಎಂಬವರೇ ನೀರಿನಲ್ಲಿ ಕೊಚ್ಚಿಕೊಂಡು ಹೋದ ವ್ಯಕ್ತಿ.
ಆನಂದ ನಾಡ್ಪಾಲು ಗ್ರಾಮದ ತಿಂಗಳೆ ಮನೋರಾಮಯ್ಯ ಶೆಟ್ಟಿ ಎಂಬವರ ಮನೆಯ ತೋಟದ ಕೆಲಸ ಮಾಡಿಕೊಂಡಿದ್ದರು. ಅವರು ಕಳೆದ 5 ದಿನಗಳ ಹಿಂದೆ ಕೆಲಸದ ನಿಮಿತ್ತ ಬ್ರಹ್ಮಾವರಕ್ಕೆ ಹೋಗಿದ್ದವರು ಜು.18ರಂದು ತೋಟದ ಕೆಲಸಕ್ಕೆ ಮರಳಿ ಬಂದಿದ್ದರು. ಆದರೆ ವಿಪರೀತ ಮಳೆಯ ಕಾರಣ ದಾರಿಮಧ್ಯೆ ಇರುವ ನೀರಿನ ಹೊಳೆ ತುಂಬಿ ಹರಿಯುತ್ತಿದ್ದರಿಂದ ಚೇರೋಳಿ ಎಂಬಲ್ಲಿರುವ ಮಾಲಕ ಮನೋರಾಮಯ್ಯ ಶೆಟ್ಟಿಯವರ ಸಂಬAಧಿಕರ ಮನೆಯಲ್ಲಿ ಊಟ ಮುಗಿಸಿದ್ದರು. ವಿಪರೀತ ಮಳೆ ಹಾಗೂ ತೋಡಿನಲ್ಲಿ ಪ್ರವಾಹವಿರುವ ಹಿನ್ನಲೆಯಲ್ಲಿ ಉಗ್ರಾಣಿಬೆಟ್ಟಿಗೆ ಹೋಗುವುದು ಬೇಡವೆಂದು ಆನಂದ ಅವರ ಸಹವರ್ತಿ ರಾಮಣ್ಣ ಹೇಳಿದರೂ ಕೇಳದ ಆನಂದ ಅವರು ಹೋದ ಹಿನ್ನಲೆಯಲ್ಲಿ ರಾಮಣ್ಣ ಅವರ ಜತೆ ಹೋಗಿದ್ದರು. ಆನಂದ ಹಗ್ಗ ಹಿಡಿದುಕೊಂಡು ಹೊಳೆಗೆ ಹಾಕಲಾಗಿದ್ದ ಮರದ ಸೇತುವೆ ದಾಡುತ್ತಿದ್ದ ವೇಳೆ ಆಯತಪ್ಪಿ ರಭಸವಾಗಿ ಹರಿಯುತ್ತಿದ್ದ ತೋಡಿಗೆ ಬಿದ್ದಾಗ ಮರದ ಕೊಂಬೆ ಹಿಡಿದು ಮೇಲಕ್ಕೆ ಬರಲು ಪ್ರಯತ್ನಿಸಿದಾಗ ಅವರ ಜತೆಗಿದ್ದ ರಾಮಣ್ಣ ಮರದ ಕೋಲನ್ನು ನೀಡಿದರೂ ಪ್ರಯೋಜನವಾಗದೇ ಆನಂದ ಅವರು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ
ಆನಂದ ಪತ್ತೆಗೆ ಅಗ್ನಿಶಾಮಕ ದಳ ಹಾಗೂ ಪೊಲೀಸರ ಕಾರ್ಯಾಚರಣೆ
ಗುರುವಾರ ಸಂಜೆ ಆನಂದ ಅವರು ಹೊಳೆಯಲ್ಲಿ ಕೊಚ್ಚಿಕೊಂಡು ಹೋದ ಬೆನ್ನಲ್ಲೇ ಹೆಬ್ರಿ ಪೊಲೀಸರು ಹಾಗೂ ಸ್ಥಳೀಯರು ಆನಂದ ಪತ್ತೆಗಾಗಿ ರಾತ್ರಿ ತೀವೃ ಶೋಧ ಮುಂದುವರಿಸಿದ್ದರು. ಆದರೆ ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿ ಶುಕ್ರವಾರ ಮುಂಜಾನೆಯಿAದ ಹೆಬ್ರಿ ತಹಶಿಲ್ದಾರ್ ಎ.ಎಸ್ ಪ್ರಸಾದ್ ಹಾಗೂ ಕಂದಾಯ ಅಧಿಕಾರಿಗಳು ಅಗ್ನಿ ಶಾಮಕ ದಳದ ಸಿಬ್ಬಂದಿಗಳ ಜತೆ ಹೆಬ್ರಿ ಪೊಲೀಸರು ಎಸ್ ಐ ಮಹೇಶ್ ಅವರ ನೇತೃತ್ವದಲ್ಲಿ ಶೋಧ ಕಾರ್ಯ ಮುಂದುವರಿಸಿದ್ದರೂ ಆನಂದ ಪತ್ತೆಯಾಗಿಲ್ಲ. ಈಗಾಗಲೇ ಸುಮಾರು 10 ಕಿ.ಮೀ ದೂರದ ಹೊಳೆಯಲ್ಲಿ ಹುಡುಕಾಡಿದರೂ ಆನಂದ ಅವರ ಸುಳಿವು ಪತ್ತೆಯಾಗಿಲ್ಲ. ಶುಕ್ರವಾರ ಸಂಜೆವೇಳೆ ಕಾರ್ಯಾಚರಣೆ ಮತ್ತೆ ಸ್ಥಗಿತಗೊಳಿಸಲಾಗಿದ್ದು, ಮತ್ತೆ ಶನಿವಾರ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಬ್ರಹ್ಮಾವರ ಮಾಬುಕಳ ನದಿ ಸೇರುವ ಸ್ಥಳದಲ್ಲಿ ಕೂಡ ಶೋಧ ನಡೆಸಲಾಗಿದ್ದು, ಆನಂದ ಅವರು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ















