ಕಾರ್ಕಳ: ಪೊಲೀಸರ ಗುಂಡಿಗೆ ಬಲಿಯಾದ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಹತ್ಯೆ ನಡೆದು 4 ದಿನಗಳು ಕಳೆದಿದ್ದು, ಈತನ ಎನ್‌ಕೌಂಟರ್ ಕಥೆಯೇ ಅತ್ಯಂತ ರೋಚಕ. ಕಬಿನಿ ದಳದ ನಾಯಕ ವಿಕ್ರಮ್ ಗೌಡನ ಹತ್ಯೆಯಿಂದ ನಕ್ಸಲರ ಆಧಾರಸ್ತಂಭ ಕಳಚಿ ಬಿದ್ದಂತಾಗಿದೆ. ಆದರೆ ಇದೇ ಘಟನೆಯಿಂದ ನಕ್ಸಲರು ಪ್ರತೀಕಾರ ತೀರಿಸಬಹುದೆಂಬ ಲೆಕ್ಕಾಚಾರದಲ್ಲಿ ಎಎನ್‌ಫ್ ಪೊಲೀಸರು ಎಲ್ಲೆಡೆ ಗರಿಷ್ಠ ಕಟ್ಟೆಚ್ಚರ ವಹಿಸಿದ್ದಾರೆ.
ಕೇರಳ ಹಾಗೂ ಕರ್ನಾಟಕ ಪೊಲೀಸರಿಗೆ ಬೇಕಾಗಿದ್ದ ವಿಕ್ರಮ್ ಗೌಡ ಅತ್ಯಂತ ಚಾಣಾಕ್ಷನಾಗಿದ್ದ, ತನ್ನ ಶಸ್ತ್ರಸಜ್ಜಿತ ಪಡೆಯನ್ನು ಕಟ್ಟಿಕೊಂಡು ಮೂರು ಬಾರಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದಾತ ಕೊನೆಗೂ ತನ್ನ ಹುಟ್ಟೂರಲ್ಲೇ ಉಸಿರು ಚೆಲ್ಲುವ ಮೂಲಕ ಚಾಣಾಕ್ಷ ನಕ್ಸಲನ ಅಂತ್ಯವಾಗಿದೆ. 4ನೇ ತರಗತಿ ವಿದ್ಯಾಭ್ಯಾಸ ಮಾಡಿದ್ದ ವಿಕ್ರಮ್ ಗೌಡನಿಗೆ ಸಮಾಜ ವಿರೋಧಿ ಚಟುವಟಿಕೆ ಇಷ್ಟೊಂದು ಘೋರವಾಗಿರುತ್ತದೆ ಎನ್ನುವುದು ಅಂದು ಅನ್ನಿಸಿರಲಿಲ್ಲ, ಇದಕ್ಕೆ ಕಾರಣವೂ ಇದೆ, ಯಾಕೆಂದರೆ ಅಂದು ಬಿಸಿರಕ್ತದ ತರುಣ ಜತೆಗೆ ಓದು ಬರಹವಿಲ್ಲದ ಕಾರಣದಿಂದ ಕಾನೂನಿನ ಜ್ಞಾನವೂ ಇಲ್ಲದ ವಿಕ್ರಮ್ ಗೌಡ ಅನಾಯಾಸವಾಗಿ ನಕ್ಸಲ್ ಗುಂಪಿಗೆ ಸೇರಿದ್ದ. ಬರೋಬ್ಬರಿ 2 ದಶಕಗಳ ಕಾಲ ತೆರೆಮರೆಯಲ್ಲಿದ್ದುಕೊಂಡು ಸಮಾಜದ ವ್ಯವಸ್ಥೆಗೆ ಸವಾಲಾಗಿದ್ದಾತ ಕೊನೆಗೂ ತನ್ನೂರಲ್ಲೇ ಪ್ರಾಣಬಿಟ್ಟಿದ್ದಾನೆ.ಈ ಮೂಲಕ ಕಳೆದ 2010ರ ಮಾ.1ರಂದು ವಸಂತ ಗೌಡನ ಹತ್ಯೆಯ ಬಳಿಕ 14 ವರ್ಷಗಳ ಬಳಿಕ ಮತ್ತೊಬ್ಬ ನಕ್ಸಲ್ ಹತ್ಯೆಯಾಗಿದೆ. ಪ್ರಮುಖವಾಗಿ ಕಸ್ತೂರಿರಂಗನ್ ಹಾಗೂ ಹುಲಿ ಯೋಜನೆಯ ವಿರುದ್ಧವಾಗಿ ಮತ್ತೆ ನಕ್ಸಲರು ಸಕ್ರೀಯರಾದರೆ ಎನ್ನುವ ಅನುಮಾನವೂ ಮೂಡಿದೆ.
ಅಂದು 2010ರ ಮಾ.1ರಂದು ಮಧ್ಯಾಹ್ನ 3.30ರ ಸುಮಾರಿಗೆ ಕಾರ್ಕಳ ತಾಲೂಕಿನ(ಪ್ರಸ್ತುತ ಹೆಬ್ರಿ ತಾಲೂಕು) ಅಂಡಾರು ಗ್ರಾಮದ ಮುಟ್ಲುಪಾಡಿಯ ಮೈರೋಳಿಜೆಡ್ಡು ಎಂಬಲ್ಲಿ ನಕ್ಸಲ್ ವಸಂತ ಗೌಡನನ್ನು ಪೊಲೀಸರು ಹೊಂಚುಹಾಕಿ ಬೇಟೆಯಾಡಿದ್ದರು. ಮುಟ್ಲುಪಾಡಿ ಅರ್ಧನಾರೀಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ದಿನ ನಕ್ಸಲರು ಬಂದೇ ಬರುತ್ತಾರೆ ಎನ್ನುವ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು 3 ದಿನದ ಮೊದಲೇ ಮೈರೋಳಿಯ ದಟ್ಟಾರಣ್ಯದಲ್ಲಿ ಆಂಬುಷ್ ಹಾಕಿ ಕಾಯುತ್ತಿದ್ದರು. ರಾತ್ರಿ ಹಗಲು ಕಾದಿದ್ದ ಪೊಲೀಸರು ಇನ್ನೇನು ಕಾರ್ಯಾಚರಣೆ ಮುಗಿಸಬೇಕೆನ್ನುವ ಹಂತದಲ್ಲಿ ಇರುವಾಗಲೇ ವಸಂತ ಗೌಡ ನೇತೃತ್ವದ ನಕ್ಸಲರ ತಂಡ ಮೈರೋಳಿ ಮೂಲಕ ಮುಟ್ಲುಪಾಡಿಯತ್ತ ಹೆಜ್ಜೆ ಹಾಕಿತ್ತು.ಇದೇ ಅವಕಾಶಕ್ಕಾಗಿ ಕಾದಿದ್ದ ಪೊಲೀಸರು ನಕ್ಸಲರಿಗೆ ಶರಣಾಗುವಂತೆ ಸೂಚಿಸಿತ್ತು, ಆದರೆ ಇದಕ್ಕೊಪ್ಪದ ನಕ್ಸಲರು ಗುಂಡಿನ ದಾಳಿ ನಡೆಸುತ್ತಿದ್ದಂತೆ ಪೊಲೀಸರು ಪ್ರತಿದಾಳಿ ನಡೆಸಿದ ಪರಿಣಾಮ ನಕ್ಸಲ್ ವಸಂತ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದ, ಆದರೆ ಈತನ ಜತೆಗಿದ್ದ ಇತರೇ ಮೂವರು ಪರಾರಿಯಾಗಿದ್ದರು. ಈ ಘಟನೆಯ ಬಳಿಕ ಅಂದಿನ ಉಡುಪಿ ಎಸ್ಪಿ ಪ್ರವೀಣ್ ಮಧುಕರ್ ಪವಾರ್, ಐಜಿಪಿ ಎ.ಎಂ ಪ್ರಸಾದ್ ಘಟನಾ ಸ್ಥಳಕ್ಕೆ ಆಗಮಿಸಿ ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಘಃಟನೆ ನಡೆದ 13ನೇ ದಿನಕ್ಕೆ ವಸಂತ ಗೌಡ ಹತ್ಯೆಯಾದ ಸ್ಥಳದಲ್ಲೇ ನಕ್ಸಲರು ಆತನಿಗೆ ಕಲ್ಲಿನ ಘೋರಿ ನಿರ್ಮಿಸಿ ಮಾವೋವಾದಿ ಜಿಂದಾಬಾದ್ ಎನ್ನುವ ಬಿತ್ತಿಪತ್ರ ಎಸೆದಿದ್ದರು. ಈ ಘಟನೆಯ ಬಳಿಕ ತಣ್ಣಗಾಗಿದ್ದ ನಕ್ಸಲರು 2012ರಲ್ಲಿ ಪೊಲೀಸ್ ಮಾಹಿತಿದಾರ ಎನ್ನುವ ಶಂಕೆಯಲ್ಲಿ ಕಬ್ಬಿನಾಲೆಯ ತೆಂಗುಮಾರು ಸದಾಶಿವ ಗೌಡ ಎಂಬಾತನನ್ನು ಅಪಹರಿಸಿ ಮರಕಟ್ಟಿಹಾಕಿ ಚಿತ್ರಹಿಂಸೆ ನೀಡಿ ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದರು. ಈ ಘಟನೆಯ ಬಳಿಕ ನಕ್ಸಲ್ ಚಟುವಟಿಕೆ ಬಹುತೇಕ ನೇಪಥ್ಯಕ್ಕೆ ಸರಿದಿತ್ತು.
ಇನ್ನೇನು ನಕ್ಸಲ್ ಸಿದ್ದಾಂತವೇ ನಶಿಸಿತು ಎನ್ನುವಾಗಲೇ ಮತ್ತೊಂದು ಎನ್‌ಕೌಂಟರ್ ಇಡೀ ಪಶ್ಚಿಮ ಘಟ್ಟವನ್ನೇ ಬೆಚ್ಚಿ ಬೀಳಿಸಿದೆ. ಪ್ರಮುಖ ನಕ್ಸಲ್ ನಾಯಕ ವಿಕ್ರಮ್ ಗೌಡ ಶರಣಾಗದೇ ಸಮಾಜದ ವಿರುದ್ಧದ ಹೋರಾಟದ ಹಾದಿಯಲ್ಲಿ ಪ್ರಾಣಬಿಟ್ಟಿದ್ದಾನೆ. ಇದೀಗ ವಿಕ್ರಮ್ ಗೌಡನ ಹತ್ಯೆಯಿಂದ ಮುಂದೆ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ನಕ್ಸಲ್ ಚಟುವಟಿಕೆ ಯಾವ ದಿಕ್ಕಿನತ್ತ ಸಾಗುತ್ತದೆ, ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಪೊಲೀಸರ ಕ್ರಮಗಳು ಏನು ಎನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.
ಕಾರ್ಕಳ:ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಕುಖ್ಯಾತ ನಕ್ಸಲ್ ವಿಕ್ರಂ ಗೌಡನನ್ನು ಎನ್’ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ. ಪೊಲೀಸರ ಕಾರ್ಯಶೈಲಿ ಶ್ಲಾಘನೀಯ. ಜೀವದ ಹಂಗು ತೊರೆದು ದೇಶ ವಿರೋಧಿ ಶಕ್ತಿಗಳನ್ನು ಯಾವುದೇ ಮುಲಾಜಿಗೆ ಒಳಗಾಗದೇ ಹತ್ತಿಕ್ಕಿದ ANF ಪೊಲೀಸರ ಕಾರ್ಯವೈಖರಿ ಅಭಿನಂದನೀಯ ಎಂದು ಕಾರ್ಕಳ ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಹೇಳಿದ್ದಾರೆ.
ಆದರೆ ಈ ಘಟನೆಯ ಬಳಿಕ ಕೆಲವು ಪ್ರಶ್ನೆಗಳು ಉದ್ಭವಿಸಿವೆ. ರಾಜ್ಯದಲ್ಲಿ ಈ ಹಿಂದೆ ಸ್ಥಗಿತಗೊಂಡಿದ್ದ ನಕ್ಸಲ್ ಚಟುವಟಿಕೆ ಇದೀಗ ಹದಿನೈದು ವರ್ಷಗಳ ಬಳಿಕ ಮತ್ತೆ ಕಾಣಿಸಿಕೊಂಡಿದ್ದು,ನಕ್ಸಲರು ಬಹಿರಂಗವಾಗಿ ಕಾಣಿಸಿಕೊಳ್ಳುವುದಕ್ಕೆ ಕಾರಣವೇನು ? ಅಥವಾ ಕಾರಣ ಯಾರು ?
ರಾಜ್ಯ ಸರ್ಕಾರ, ಅದರಲ್ಲೂ ವಿಶೇಷವಾಗಿ ಸಿಎಂ ಸಿದ್ದರಾಮಯ್ಯ ಅವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಗರ ನಕ್ಸಲರ ಬಗ್ಗೆ ತೋರುತ್ತಿರುವ ವಿಶೇಷ ಪ್ರೀತಿ ಇದಕ್ಕೆ ಪ್ರೇರಣೆಯಲ್ಲವೇ ?
ಸ್ಥಳೀಯ ಜನಪ್ರತಿನಿಧಿಗಳು ಅಭಿವೃದ್ಧಿ ವಿಚಾರದಲ್ಲಿ ತೋರಿದ ವಿಶೇಷ ಆಸಕ್ತಿಯಿಂದ ಸ್ಥಳೀಯರು ನಕ್ಸಲ್ ಸಿದ್ಧಾಂತವನ್ನು ತಿರಸ್ಕರಿಸಿದ್ದರು. ಸ್ಥಳೀಯರ ಬೆಂಬಲವಿಲ್ಲದೇ ಅಳಿದು ಹೋಗುವ ಹಂತಕ್ಕೆ ತಲುಪಿದ್ದ ನಕ್ಸಲ್ ಚಟುವಟಿಕೆ ಇದೀಗ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಮತ್ತೆ ತಲೆ ಎತ್ತಿದೆ.
ಸಿದ್ದರಾಮಯ್ಯನವರೇ ದೇಶವಿರೋಧಿ ಹಾಗೂ ಬುಡಮೇಲು ಕೃತ್ಯಕ್ಕೆ ನೆರವಾಗುವವರಿಗೆ ಆದರ್ಶದ ನೆಪದಲ್ಲಿ ಬೆಂಬಲ ರಕ್ಷಣೆ ಬೇಡ. ಇದು ಪಶ್ಚಿಮಘಟ್ಟ ಜನರ ಶಾಂತಿ- ನೆಮ್ಮದಿ ಕೆಡಿಸಲಿದೆ. ಹೀಗಾಗಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯನ್ನು ಇನ್ನಷ್ಟು ಬಲಗೊಳಿಸಿ. ಎ ಎನ್ಎಫ್ ಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ. ನಕ್ಸಲ್ ಚಟುವಟಿಕೆ ಹತ್ತಿಕ್ಕಿ ಜತೆಗೆ ಪಶ್ಚಿಮಘಟ್ಟ ಭಾಗದಲ್ಲಿ ಅಭಿವೃದ್ಧಿ ಕಾರ್ಯವನ್ನೂ ಚುರುಕುಗೊಳಿಸಬೇಕೆಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಾಸಕ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ
ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನೆಲಸಮಗೊಳಿಸಿ ಅಲ್ಲೇ ಮಸೀದಿಯನ್ನು ಮತ್ತೆ ಕಟ್ಟುತ್ತೇವೆ ಎಂದು ಬಾಂಗ್ಲಾದೇಶಿ ಇಸ್ಲಾಮಿಸ್ಟ್ ಉಗ್ರ ಸಂಘಟನೆ ಪ್ರತಿಜ್ಞೆ ಮಾಡುವ ಮೂಲಕ ಭಾರತದ ವಿರುದ್ಧ ಬಹಿರಂಗ ಬೆದರಿಕೆ ಹಾಕಿದೆ.
ನಾವು ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಕೆಲಸ ಮಾಡುತ್ತಿದ್ದೇವೆ. ಇಸ್ಲಾಮಿಕ್ ಯುವಕರೇ, ನಿಮ್ಮ ಬಳಿ ಏನಿದೆಯೋ ಅದರೊಂದಿಗೆ ಸಿದ್ಧರಾಗಿರಿ, ಏಕೆಂದರೆ ಭಾರತದ ಮೇಲೆ ದಾಳಿ ಮಾಡಬೇಕು.ನಾವು ರಾಮ ಮಂದಿರವನ್ನು ನೆಲಸಮಗೊಳಿಸಿ ಮತ್ತೆ ಮಸೀದಿಯನ್ನು ನಿರ್ಮಿಸುತ್ತೇವೆ. ನರೇಂದ್ರ ಮೋದಿ ಅವರ ಎರಡೂ ಕೆನ್ನೆಗಳಿಗೆ ಶೂಗಳಿಂದ ಹೊಡೆಯುತ್ತೇನೆ. ಆಟವನ್ನು ಅವರೊಂದಿಗೆ ಆಡುತ್ತೇವೆ, ನಾವು ಸಿದ್ಧರಿದ್ದೇವೆ” ಎಂದು ತೀವ್ರಗಾಮಿ ಬಾಂಗ್ಲಾದೇಶಿ ಇಸ್ಲಾಮಿಸ್ಟ್ ವಿಡಿಯೋದಲ್ಲಿ ಘೋಷಿಸಿದ್ದಾನೆ.
ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ, ವಿಶೇಷವಾಗಿ ಹಿಂದೂ ಸಮುದಾಯದ ಸುರಕ್ಷತೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಮಧ್ಯೆ ಈ ವೀಡಿಯೊ ಬಂದಿದೆ. ಇತ್ತೀಚಿನ ವಾರಗಳಲ್ಲಿ ಹಿಂದೂ ಮನೆಗಳು, ವ್ಯವಹಾರಗಳು ಮತ್ತು ಧಾರ್ಮಿಕ ಸ್ಥಳಗಳ ಮೇಲೆ ದಾಳಿಗಳು ಆತಂಕಕಾರಿಯಾಗಿ ಹೆಚ್ಚುತ್ತಿದ್ದು, ಮಾನವ ಹಕ್ಕುಗಳ ಸಂಘಟನೆಗಳಲ್ಲಿ ಎಚ್ಚರಿಕೆಯನ್ನು ಹೆಚ್ಚಿಸಿದೆ.