ಕಾರ್ಕಳ:ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಕುಖ್ಯಾತ ನಕ್ಸಲ್ ವಿಕ್ರಂ ಗೌಡನನ್ನು ಎನ್’ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ. ಪೊಲೀಸರ ಕಾರ್ಯಶೈಲಿ ಶ್ಲಾಘನೀಯ. ಜೀವದ ಹಂಗು ತೊರೆದು ದೇಶ ವಿರೋಧಿ ಶಕ್ತಿಗಳನ್ನು ಯಾವುದೇ ಮುಲಾಜಿಗೆ ಒಳಗಾಗದೇ ಹತ್ತಿಕ್ಕಿದ ANF ಪೊಲೀಸರ ಕಾರ್ಯವೈಖರಿ ಅಭಿನಂದನೀಯ ಎಂದು ಕಾರ್ಕಳ ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಹೇಳಿದ್ದಾರೆ.
ಆದರೆ ಈ ಘಟನೆಯ ಬಳಿಕ ಕೆಲವು ಪ್ರಶ್ನೆಗಳು ಉದ್ಭವಿಸಿವೆ. ರಾಜ್ಯದಲ್ಲಿ ಈ ಹಿಂದೆ ಸ್ಥಗಿತಗೊಂಡಿದ್ದ ನಕ್ಸಲ್ ಚಟುವಟಿಕೆ ಇದೀಗ ಹದಿನೈದು ವರ್ಷಗಳ ಬಳಿಕ ಮತ್ತೆ ಕಾಣಿಸಿಕೊಂಡಿದ್ದು,ನಕ್ಸಲರು ಬಹಿರಂಗವಾಗಿ ಕಾಣಿಸಿಕೊಳ್ಳುವುದಕ್ಕೆ ಕಾರಣವೇನು ? ಅಥವಾ ಕಾರಣ ಯಾರು ?
ರಾಜ್ಯ ಸರ್ಕಾರ, ಅದರಲ್ಲೂ ವಿಶೇಷವಾಗಿ ಸಿಎಂ ಸಿದ್ದರಾಮಯ್ಯ ಅವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಗರ ನಕ್ಸಲರ ಬಗ್ಗೆ ತೋರುತ್ತಿರುವ ವಿಶೇಷ ಪ್ರೀತಿ ಇದಕ್ಕೆ ಪ್ರೇರಣೆಯಲ್ಲವೇ ?
ಸ್ಥಳೀಯ ಜನಪ್ರತಿನಿಧಿಗಳು ಅಭಿವೃದ್ಧಿ ವಿಚಾರದಲ್ಲಿ ತೋರಿದ ವಿಶೇಷ ಆಸಕ್ತಿಯಿಂದ ಸ್ಥಳೀಯರು ನಕ್ಸಲ್ ಸಿದ್ಧಾಂತವನ್ನು ತಿರಸ್ಕರಿಸಿದ್ದರು. ಸ್ಥಳೀಯರ ಬೆಂಬಲವಿಲ್ಲದೇ ಅಳಿದು ಹೋಗುವ ಹಂತಕ್ಕೆ ತಲುಪಿದ್ದ ನಕ್ಸಲ್ ಚಟುವಟಿಕೆ ಇದೀಗ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಮತ್ತೆ ತಲೆ ಎತ್ತಿದೆ.
ಸಿದ್ದರಾಮಯ್ಯನವರೇ ದೇಶವಿರೋಧಿ ಹಾಗೂ ಬುಡಮೇಲು ಕೃತ್ಯಕ್ಕೆ ನೆರವಾಗುವವರಿಗೆ ಆದರ್ಶದ ನೆಪದಲ್ಲಿ ಬೆಂಬಲ ರಕ್ಷಣೆ ಬೇಡ. ಇದು ಪಶ್ಚಿಮಘಟ್ಟ ಜನರ ಶಾಂತಿ- ನೆಮ್ಮದಿ ಕೆಡಿಸಲಿದೆ. ಹೀಗಾಗಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯನ್ನು ಇನ್ನಷ್ಟು ಬಲಗೊಳಿಸಿ. ಎ ಎನ್ಎಫ್ ಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ. ನಕ್ಸಲ್ ಚಟುವಟಿಕೆ ಹತ್ತಿಕ್ಕಿ ಜತೆಗೆ ಪಶ್ಚಿಮಘಟ್ಟ ಭಾಗದಲ್ಲಿ ಅಭಿವೃದ್ಧಿ ಕಾರ್ಯವನ್ನೂ ಚುರುಕುಗೊಳಿಸಬೇಕೆಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಾಸಕ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ
































































































