Share this news

ನವದೆಹಲಿ : ದೂರಸಂಪರ್ಕ ಕಾಯ್ದೆ 2023ರ ಪ್ರಮುಖ ವಿಭಾಗಗಳ ಅನುಷ್ಠಾನದೊಂದಿಗೆ, ಜೂನ್ 26ರಿಂದ ದೇಶದಲ್ಲಿ ಹೊಸ ಟೆಲಿಕಾಂ ಕಾಯ್ದೆಯ ಕೆಲವು ವಿಭಾಗಗಳು ಜಾರಿಗೆ ಬರಲಿವೆ.
ಈ ಕಾಯ್ದೆಯು ಭಾರತೀಯ ಟೆಲಿಗ್ರಾಫ್ ಕಾಯ್ದೆ, 1885, ವೈರ್ ಲೆಸ್ ಟೆಲಿಗ್ರಾಫಿ ಕಾಯ್ದೆ (1933) ಮತ್ತು ಟೆಲಿಗ್ರಾಫ್ ವೈರ್ (ಕಾನೂನುಬಾಹಿರ ಸ್ವಾಧೀನ) ಕಾಯ್ದೆ (1950) ನಿಂದ ನಿಯಂತ್ರಿಸಲ್ಪಡುವ ಹಳೆಯ ನಿಯಮಗಳನ್ನು ಬದಲಾಯಿಸುತ್ತದೆ.

ಜೂನ್ 26 ರಂದು ಜಾರಿಗೆ ಬರುವ ಈ ನಿಯಮಾವಳಿಗಳ ಅಡಿ ವಿಪತ್ತು ನಿರ್ವಹಣೆ ಸೇರಿದಂತೆ ಯಾವುದೇ ಸಾರ್ವಜನಿಕ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಥವಾ ಸಾರ್ವಜನಿಕ ಸುರಕ್ಷತೆ ಹಿತದೃಷ್ಟಿಯಿಂದ ಆಡಳಿತ ನಡೆಸುವ ಸರ್ಕಾರವು ಅಧಿಕೃತ ಘಟಕದಿಂದ ಯಾವುದೇ ದೂರಸಂಪರ್ಕ ಸೇವೆ ಅಥವಾ ದೂರಸಂಪರ್ಕ ಜಾಲವನ್ನು ತಾತ್ಕಾಲಿಕವಾಗಿ ಸ್ವಾಧೀನಪಡಿಸಿಕೊಳ್ಳಬಹುದು. ವಿದೇಶಗಳೊಂದಿಗಿನ ಸೌಹಾರ್ದ ಸಂಬಂಧ ಅಥವಾ ದೇಶದ ಭದ್ರತೆ ಅಥವಾ ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ನಿರ್ದಿಷ್ಟ ಅಥವಾ ಎಲ್ಲ ದೂರಸಂಪರ್ಕ ಸೇವೆಗಳ ಮೇಲಿನ ನಿಯಂತ್ರಣ ಮತ್ತು ನಿರ್ವಹಣೆ ಮಾಡುವ ಅವಕಾಶ ಸರ್ಕಾರಕ್ಕೆ ಇರಲಿದೆ.

ಅಲ್ಲದೇ ಈ ಕಾಯಿದೆ ಪ್ರಕಾರ, ದೂರಸಂಪರ್ಕ ಜಾಲಗಳನ್ನು ಸ್ಥಾಪಿಸಲು ಅಥವಾ ನಿರ್ವಹಿಸಲು, ಸೇವೆಗಳನ್ನು ಒದಗಿಸಲು ಅಥವಾ ಅನುಪಾತದ ಸಾಧನಗಳನ್ನು ಹೊಂದಲು ಬಯಸುವ ಯಾವುದೇ ಟೆಲಿಕಾಂ ಸಂಸ್ಥೆಯು ಸರ್ಕಾರದಿಂದ ಅಧಿಕೃತಗೊಳಿಸಬೇಕಾಗುತ್ತದೆ.

ಹೊಸ ನಿಯಮಗಳ ಜಾರಿಯಿಂದಾಗಿ, ಸಾರ್ವತ್ರಿಕ ಸೇವಾ ಬಾಧ್ಯತೆಯ ನಿಧಿಯು ‘ಡಿಜಿಟಲ್ ಭಾರತ್’ ನಿಧಿಯಾಗಿ ಮಾರ್ಪಾಡಾಗಲಿದೆ. ಇದನ್ನು ಗ್ರಾಮೀಣ ಪ್ರದೇಶಗಳಲ್ಲಿ ಟೆಲಿಕಾಂ ಸೇವೆಗಳ ಸ್ಥಾಪನೆಗಷ್ಟೇ ಅಲ್ಲದೆ, ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಿಗೂ ಬಳಸಿಕೊಳ್ಳಬಹುದಾಗಿದೆ. ಜೊತೆಗೆ, ಬಳಕೆದಾರರನ್ನು ಸ್ಪ್ಯಾಮ್‌ ಮತ್ತು ದುರುದ್ದೇಶದಿಂದ ಕೂಡಿದ ಸಂವಹನಗಳಿಂದ ರಕ್ಷಿಸುವಂತೆ ದೂರಸಂಪರ್ಕ ನೆಟ್‌ವರ್ಕ್‌ಗಳಿಗೆ ಈ ನಿಯಮಗಳು ಆದೇಶಿಸಲಿವೆ.

ಈ ಕಾಯ್ದೆಗಳು ಭಾರತದ ಟೆಲಿಕಾಂ ಕ್ಷೇತ್ರವನ್ನು ಆಧುನೀಕರಿಸುವುದು, ನಾವೀನ್ಯತೆಯನ್ನು ಉತ್ತೇಜಿಸುವುದು, ಬಳಕೆದಾರರ ರಕ್ಷಣೆ ಮತ್ತು ಡಿಜಿಟಲ್ ಯುಗಕ್ಕೆ ಹೆಚ್ಚು ದೃಢವಾದ ಮೂಲಸೌಕರ್ಯಗಳನ್ನು ರಚಿಸುವ ಗುರಿಯನ್ನು ಹೊಂದಿವೆ.

 

 

                        

                          

 

 

 

 

 

                        

                          

 

 

Leave a Reply

Your email address will not be published. Required fields are marked *