Share this news

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಗೆ ನೂರಾರು ಕೋಟಿ ರುಪಾಯಿ ಆದಾಯ ಹರಿದು ಬಂದಿದೆ. ಡಿಸೆಂಬರ್ 31 ರ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರ್ಧ ದಿನದ ಅವಧಿಯಲ್ಲಿ ಕೆಎಸ್‌ಬಿಸಿಎಲ್ ನಿಂದ ಬರೋಬ್ಬರಿ 308 ಕೋಟಿ ರುಪಾಯಿ ಮದ್ಯ ಮಾರಾಟವಾಗಿದೆ.
ಕಳೆದ ವರ್ಷ 2023 ರ ಡಿಸೆಂಬರ್ 31 ರಂದು 193 ಕೋಟಿ ರು. ಮದ್ಯ ಮಾರಾಟ ಆಗಿತ್ತು. 2024 ಡಿಸೆಂಬರ್ 31 ರಂದು 7,305 ಮದ್ಯ ಮಾರಾಟಗಾರರು ಕೆಎಸ್‌ಬಿಸಿಎಲ್‌ನಿಂದ ಮದ್ಯ ಖರೀದಿ ಮಾಡಿದ್ದಾರೆ.

ಐಎಂಎಲ್ 4,83,715 ಲಕ್ಷ ಬಾಕ್ಸ್ ಮಾರಾಟದಿಂದ 250.25 ಕೋಟಿ ಆದಾಯ ಸಂಗ್ರಹವಾಗಿದೆ. ಬಿಯರ್- 2,92,339 ಲಕ್ಷ ಬಾಕ್ಸ್ ಮಾರಾಟದಿಂದ 57,75 ಕೋಟಿ ಆದಾಯ ಸಂಗ್ರಹವಾಗಿದೆ. ಒಟ್ಟು 7,76,042 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ ಒಟ್ಟು 308 ಕೋಟಿ ರುಪಾಯಿ ಆದಾಯ ಸಂಗ್ರಹವಾಗಿದೆ.

27-12-2024 ರ ಶುಕ್ರವಾರದಂದು ಕೂಡ ಬರೋಬ್ಬರಿ 408.58 ಕೋಟಿ ರುಪಾಯಿ ಮದ್ಯ ಮಾರಾಟವಾಗಿತ್ತು. ಐಎಂಎಲ್ 6,22,062 ಲಕ್ಷ ಬಾಕ್ಸ್ ಮಾರಾಟದಿಂದ 327,50 ಕೋಟಿ ರುಪಾಯಿ ಆದಾಯ ಸಂಗ್ರಹವಾಗಿತ್ತು. ಬಿಯರ್ 4,04,998 ಲಕ್ಷ ಬಾಕ್ಸ್ ಮಾರಾಟದಿಂದ 80,58 ಕೋಟಿ ರುಪಾಯಿ ಆದಾಯ ಗಳಿಕೆಯಾಗಿತ್ತು. ಐಎಂಎಲ್, ಬಿಯರ್ ಸೇರಿ ಒಟ್ಟು- 10,27,060 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ 408.50 ಕೋಟಿ ರುಪಾಯಿ ಆದಾಯ ಹರಿದುಬಂದಿತ್ತು.

ಈ ನಡುವೆ ಹೊಸ ವರ್ಷಾರಂಭ ಸಂದರ್ಭದಲ್ಲಿ ಕರ್ನಾಟಕ ಕರಾವಳಿಯ ದೇವಸ್ಥಾನಗಳಿಗೆ ಭಕ್ತರು ಭೇಟಿ ನೀಡುತ್ತಿದ್ದಾರೆ. ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನ ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ದೇಗುಲಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಧರ್ಮಸ್ಥಳದಲ್ಲಿ ಭಕ್ತ ಸಾಗರವೇ ನೆರೆದಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರ ದಂಡು ಮಂಜುನಾಥ ಸ್ವಾಮಿಯ ದರ್ಶನಕ್ಕೆ ಮುಗಿಬಿದ್ದಿದೆ. ಬೆಂಗಳೂರು ಹಾಗೂ ಉತ್ತರ ಕರ್ನಾಟಕ ಭಾಗದಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಸದ್ಯ ದೇವಸ್ಥಾನದ ಕ್ಯೂ ಸೆಂಟರ್ ನಲ್ಲಿ ಭಾರೀ ಜನಜಂಗುಳಿ ಇದೆ. ದೇವಸ್ಥಾನದ ಮುಂಭಾಗದಲ್ಲಿಯೂ ಭಾರೀ ಸಂಖ್ಯೆಯಲ್ಲಿ ಭಕ್ತ ಸಮೂಹ ಸೇರಿದ್ದು, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.

 

 

Leave a Reply

Your email address will not be published. Required fields are marked *