Share this news

ಕಾರ್ಕಳ: ಇಂದಿನ ಜಾಗತಿಕ ಹಣಕಾಸು ಕ್ಷೇತ್ರಕ್ಕೆ ಹೋಲಿಸಿದರೆ, ಭಾರತದ ಯುಪಿಐ, ಡಿಜಿಟಲ್ ಪಾವತಿ ಸಕ್ರಿಯತೆ ಸೇರಿದಂತೆ ಇತರ ಆವಿಷ್ಕಾರಗಳು ಜಗತ್ತಿಗೆ ಮಾದರಿಯಾಗಿವೆ” ಎಂದು ಜಾಗತಿಕ ಪ್ರಮುಖ ಹಣಕಾಸು ಸಂಸ್ಥೆಯಾದ ನ್ಯೂಯಾರ್ಕ್‌ನ ಜೆ.ಪಿ. ಮೋರ್ಗನ್ ಸಂಸ್ಥೆಯ ಮುಖ್ಯ ತಾಂತ್ರಿಕ ಅಧಿಕಾರಿ ಸುರೇಶ್ ಶೆಟ್ಟಿ ಅಭಿಪ್ರಾಯಪಟ್ಟರು.

ಶನಿವಾರ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ 2025ನೇ ಸಾಲಿನ ಬಿ.ಇ. ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದ ಮೊದಲ ಆವೃತ್ತಿಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. “ಭಾರತವು ಹಣಕಾಸು ಮತ್ತು ವಿತ್ತೀಯ ವ್ಯವಹಾರಗಳಿಗೆ ಪೂರಕವಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಜಾಗತಿಕವಾಗಿ ದಾಪುಗಾಲಿಡುತ್ತಿದೆ. ಜಗತ್ತು ನಿರಂತರವಾಗಿ ಬದಲಾಗುತ್ತಿದ್ದು, ಆಯಾ ಕಾಲಘಟ್ಟದಲ್ಲಿ ವಿಶಿಷ್ಟ ತಂತ್ರಜ್ಞಾನಗಳು ಮೂಡಿಬರುತ್ತಿವೆ. ವಿದ್ಯಾರ್ಥಿಗಳು ಯಾವುದಕ್ಕೂ ಜೋತುಬೀಳದೆ, ಬದಲಾವಣೆಗೆ ತೆರೆದುಕೊಳ್ಳಬೇಕು ಮತ್ತು ಕುತೂಹಲವನ್ನು ಬೆಳೆಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.

“ಪ್ರಸ್ತುತ ನಾವು ಲೆಡ್ಜರ್, ಬ್ಲಾಕ್‌ಚೈನ್, ಕೃತಕ ಬುದ್ಧಿಮತ್ತೆ (AI) ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಬಗೆಗೆ ಮಾತನಾಡುತ್ತಿದ್ದೇವೆ. ಇದ್ಯಾವುದರ ಬಗೆಗೂ ಆತಂಕಪಡುವ ಅಗತ್ಯವಿಲ್ಲ. ವೃತ್ತಿಜೀವನದಲ್ಲಿ ಮುಂದುವರಿಯುತ್ತಿದ್ದಂತೆ ನಮ್ಮ ವ್ಯವಸ್ಥೆಗಳನ್ನು ಆಸಕ್ತಿಕರವಾಗಿ ಉತ್ತಮಪಡಿಸುವುದು ಮುಖ್ಯವಾಗಿದೆ. ಇತಿಹಾಸದಲ್ಲಿ ಪ್ರತಿಯೊಂದು ಮಹಾನ್ ಆವಿಷ್ಕಾರವೂ ಆರಂಭದಲ್ಲಿ ವಿರೋಧವನ್ನು ಎದುರಿಸಿದೆ. ಭಾರತದ ಯುವಜನರು ಧೈರ್ಯಶಾಲಿಗಳಾಗಿದ್ದು, ಭವಿಷ್ಯದ ಭಾರತವನ್ನು ಮತ್ತಷ್ಟು ಬೆಳಗಿಸುವ ಶಕ್ತಿಯಾಗಿದ್ದಾರೆ,” ಎಂದು ಸುರೇಶ್ ಶೆಟ್ಟಿ ಬಣ್ಣಿಸಿದರು.

ನಿಟ್ಟೆ ವಿ.ವಿ. ಕುಲಸಚಿವ ಡಾ. ಹರ್ಷ ಹಾಲಹಳ್ಳಿ ಅವರು ಶುಭ ಹಾರೈಸಿದರು. ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೆರಾಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳನ್ನು ಚಿನ್ನ ಮತ್ತು ಬೆಳ್ಳಿಯ ಪದಕ ನೀಡುವ ಮೂಲಕ ಗುರುತಿಸಲಾಯಿತು. 2025ನೇ ಸಾಲಿನಲ್ಲಿ ಬಿ.ಇ. ಪದವೀಧರರಾದ ಬಯೋಟೆಕ್ನಾಲಜಿ, ಸಿವಿಲ್ ಎಂಜಿನಿಯರಿಂಗ್, ಕಂಪ್ಯೂಟರ್ ಆ್ಯಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ರೊಬೋಟಿಕ್ಸ್ ಆ್ಯಂಡ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಈ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಲಾಯಿತು.

ವೇದಿಕೆಯಲ್ಲಿ ಉಪಪ್ರಾಂಶುಪಾಲ ಡಾ| ನಾಗೇಶ್ ಪ್ರಭು, ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ನ ಪರೀಕ್ಷಾ ನಿಯಂತ್ರಕ ಡಾ|ಸುಬ್ರಹ್ಮಣ್ಯ ಭಟ್, ಉಪಕುಲಸಚಿವೆ ಡಾ|ರೇಖಾ ಭಂಡಾರ್ಕರ್, ನಿಟ್ಟೆ ತಾಂತ್ರಿಕ ಕಾಲೇಜಿನ ಇಂಡಸ್ಟ್ರೀ ಇನ್ಶ್ಟಿಟ್ಯೂಟ್ ಇಂಟರಾಕ್ಷನ್‌ನ ನಿರ್ದೇಶಕ ಡಾ|ಪರಮೇಶ್ವರನ್, ಸ್ಟೂಡೆಂಟ್ ವೆಲ್ಫೇರ್ ಡೀನ್ ಡಾ| ನರಸಿಂಹ ಬೈಲಕೇರಿ, ಆರ್&ಡಿ ಡೀನ್ ಡಾ| ಸುದೇಶ್ ಬೇಕಲ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ವಿಟಿಯು ಸ್ಕೀಮ್ ನ ಪರೀಕ್ಷಾ ನಿಯಂತ್ರಕ ಡಾ|ಶ್ರೀನಿವಾಸ್ ರಾವ್ ಬಿ.ಆರ್ ಪದವಿಪ್ರದಾನ ಸಮಾರಂಭದ ಮೆರವಣಿಗೆಯನ್ನು ಮುನ್ನಡೆಸಿದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|ನಿರಂಜನ್ ಎನ್ ಚಿಪ್ಳೂಣ್ಕರ್ ವಾರ್ಷಿಕ ವರದಿಯನ್ನು ವಾಚಿಸುವುದರೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಡೀನ್ ಎಕಾಡೆಮಿಕ್ಸ್ ಡಾ|ಐ.ಆರ್ ಮಿತ್ತಂತಾಯ ಚಿನ್ನ ಹಾಗೂ ಬೆಳ್ಳಿಯ ಪದಕಗಳಿಸಿದ ವಿದ್ಯಾರ್ಥಿಗಳ ಹೆಸರುಗಳನ್ನು ವಾಚಿಸಿದರು. ಸಹಾಯಕ ಪರೀಕ್ಷಾ ನಿಯಂತ್ರಕ ಡಾ| ವೆಂಕಟೇಶ್ ಕಾಮತ್ ವಂದಿಸಿದರು. ವಿದ್ಯಾರ್ಥಿನಿಯರಾದ ನಿಹಾರಿಕಾ ಹಾಗೂ ಶ್ರದ್ಧಾ ಶೇಟ್ ಪ್ರಾರ್ಥಿಸಿದರು. ಮಾಸ್ಟರ್ ಆಫ್ ಕಂಪ್ಯೂಟರ್ ಎಪ್ಲಿಕೇಶನ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೇಮಿತಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

 

 

 

Leave a Reply

Your email address will not be published. Required fields are marked *