ಕಾರ್ಕಳ: ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ. ಇಲ್ಲಿ ಹಲವು ಧರ್ಮಗಳ ಜನರು ವಾಸಿಸುತ್ತಿದ್ದು, ಎಲ್ಲಾ ಧರ್ಮಗಳೂ ಅದರದ್ದೇ ಆದ ಸಿದ್ಧಾಂತವನ್ನು ಪ್ರತಿಪಾದಿಸಿದರೂ ಎಲ್ಲಾ ಧರ್ಮಗಳ ಮೂಲತತ್ವ ಮಾನವೀಯತೆಯಾಗಿದೆ ಎಂದು ಮಾಜಿ ಸೈನಿಕರ ವೇದಿಕೆಯ ಅಧ್ಯಕ್ಷ ವಿಜಯ್ ಫೆರ್ನಾಂಡಿಸ್ ಅಭಿಪ್ರಾಯಪಟ್ಟರು.
ಅವರು ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಜರುಗಿದ ರಾಷ್ಟ್ರೀಯ ಸದ್ಭಾವನಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ ಎ ಕೋಟ್ಯಾನ್ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳಿಗೆ ಸದ್ಭಾವನೆಗಳನ್ನು ರೂಪಿಸುವ ಶಿಕ್ಷಣವನ್ನು ಕಾಲೇಜುಗಳಲ್ಲಿ ಹಾಗೂ ಪೋಷಕರು ಕೊಡಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ಶಂಕರ ಕುಡ್ವ ಇವರು ಸದ್ಭಾವನಾ ದಿನದ ಪ್ರತಿಜ್ಞಾವಿಧಿಯನ್ನು ನೆರವೇರಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ದತ್ತಾತ್ರೇಯ ಮಾರ್ಪಳ್ಳಿ, ಎನ್‌ಸಿಸಿ ಅಧಿಕಾರಿಗಳು ಹಾಗೂ ಉಪನ್ಯಾಸಕ ಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಮಾನವ ಹಕ್ಕು ಮತ್ತು ಧಾರ್ಮಿಕ ಸಾಮರಸ್ಯ ಘಟಕದ ಸಂಯೋಜಕಿಯಾದ ಶ್ರೀಮತಿ ಸುಚಿತ್ರಾ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.
ವಿದ್ಯಾರ್ಥಿನಿಯರಾದ ಹಿತ ಅತಿಥಿ ಪರಿಚಯ ನೆರವೇರಿಸಿ, ಸಾಧನ ಮತ್ತು ತಂಡದವರು ಏಕತಾ ಗೀತೆಯನ್ನು ಹಾಡಿದರು. ರಾ.ಸೇ.ಯೋ ವಿದ್ಯಾರ್ಥಿನಿ ಅನನ್ಯ ಕಾರ್ಯಕ್ರಮ
ನಿರೂಪಿಸಿದರು. ರಾ.ಸೇ.ಯೋ ಅಧಿಕಾರಿಯಾದ ಶಂಕರ್ ಕುಡ್ವ ವಂದಿಸಿದರು.
`