ಪಡುಬಿದ್ರೆ:ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲಾಡ್ಜ್ ನಲ್ಲಿ ಕೂಡಿ ಹಾಕಿ 12 ದಿನಗಳ ಕಾಲ ಅತ್ಯಾಚಾರ ಎಸಗಿದ ಬಳಿಕ ಬಂಧಿತನಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಖಚಿತ ಮಾಹಿತಿ ಮೇರೆಗೆ ಪಡುಬಿದ್ರೆ ಪೊಲೀಸರು ಬರೋಬ್ಬರಿ 27 ವರ್ಷಗಳ ಬಳಿಕ ಶುಕ್ರವಾರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಕುಂದಾಪುರದ ಜಮಾಲ್(56) ಎಂಬಾತ ಬಂಧಿತ ಆರೋಪಿ.
ಏನಿದು ಪ್ರಕರಣ?
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನಿವಾಸಿ ಅಪ್ರಾಪ್ತ ಬಾಲಕಿಯೊಬ್ಬಳು ಪಡುಬಿದ್ರೆಯ ಉಚ್ಚಿಲ ನಿವಾಸಿ ನಸೀಮಾ ಬಾನು ಎಂಬವರ ಮನೆ ಕೆಲಸಕ್ಕೆ ಸೇರಿಕೊಂಡಿದ್ದಳು. ಅಲ್ಲಿ ಸ್ವಲ್ಪ ಸಮಯ ಮನೆ ಕೆಲಸ ಮಾಡಿಕೊಂಡಿದ್ದ ಬಾಲಕಿ ಬಳಿಕ 1997ರ ಆಗಸ್ಟ್ 6 ರಂದು ಮನೆ ಮಾಲಕಿಗೆ ಹೇಳದೇ ನಾಪತ್ತೆಯಾಗಿದ್ದಾಳೆ. ಉಚ್ಚಿಲದಿಂದ ಆಕೆ ತನ್ನ ಮನೆಗೆ ಹೋಗಲು ನಡೆದುಕೊಂಡೇ ದಾರಿತಪ್ಪಿ ಮಣಿಪಾಲಕ್ಕೆ ಬಂದಿದ್ದಾಳೆ.
ಬಾಲಕಿ ಒಬ್ಬಳೇ ಬಸ್ ನಿಲ್ದಾಣದಲ್ಲಿ ಇರುವುದನ್ನು ಗಮನಿಸಿದ ಆರೋಪಿ ಜಮಾಲ್ ತನ್ನ ಬೈಕಿನಲ್ಲಿ ನಿನ್ನನ್ನು ಮನೆಗೆ ಕರೆದೊಯ್ದು ಬಿಡುವುದಾಗಿ ಹೇಳಿ ಆಕೆಯನ್ನು ಅಪಹರಿಸಿ 12 ದಿನಗಳ ಕಾಲ ಲಾಡ್ಜ್ ನಲ್ಲಿ ಕೂಡಿ ಹಾಕಿ ಅತ್ಯಾಚಾರ ಎಸಗಿದ್ದ.ಇದಾದ ಬಳಿಕ ಆಕೆಯನ್ನು ಊರಿಗೆ ಕಳುಹಿಸುವ ನೆಪದಲ್ಲಿ ಉಡುಪಿಯ ಲಾಡ್ಜ್ ನಲ್ಲಿ ಕೂಡಿ ಹಾಕಲು ಯತ್ನಿಸಿದಾಗ ಲಾಡ್ಜ್ ನವರು ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದಾಗ ಪೊಲೀಸರು ಆರೋಪಿ ಜಮಾಲ್ ನನ್ನು ಬಂಧಿಸಿ ಬಾಲಕಿಯನ್ನು ರಕ್ಷಿಸಿ ವಿಚಾರಿಸಿದಾಗ ಆತ ಅಪಹರಿಸಿ ಅತ್ಯಾಚಾರ ಎಸಗಿರುವುದಾಗಿ ಹೇಳಿಕೆ ನೀಡಿದ್ದ ಆಧಾರದಲ್ಲಿ ಜಮಾಲ್ ವಿರುದ್ಧ ಅಪಹರಣ, ಅತ್ಯಾಚಾರ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಆದರೆ ಬಳಿಕ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ.ಈತ ಸಧ್ಯ ಬೆಂಗಳೂರಿನ HAL ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತನ್ನ ಪತ್ನಿ ಮಕ್ಕಳ ಜತೆ ವಾಸವಿರುವ ಮಾಹಿತಿ ಪಡೆದ ಪಡುಬಿದ್ರೆ ಪೊಲೀಸರು, ಅತ್ಯಾಚಾರ ಆರೋಪಿ ಜಮಾಲ್’ನನ್ನು ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಉಡುಪಿ ಎಸ್ಪಿ ಡಾ.ಅರುಣ್ ಕುಮಾರ್ ಅವರ ಆದೇಶದ ಮೇರೆಗೆ ಪಡುಬಿದ್ರಿ ಪೊಲೀಸ್ ಠಾಣೆ ಎಸ್ಐ ಪ್ರಸನ್ನ ರವರ ನಿರ್ದೇಶನದಂತೆ ಆರೋಪಿ ಜಮಾಲ್ ಎಂಬಾತನನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಎ ಎಸ್ ಐ ರಾಜೇಶ್ ಪಿ, ಹೆಚ್ ಸಿ ರಾಜೇಶ್ ಹೆರ್ಗ, ಪಿ ಸಿ ಸಂದೇಶ್ ಪಾಲ್ಗೊಂಡಿದ್ದರು.


`