ಕಾರ್ಕಳ: ಕಳೆದ ಒಂದು ವರ್ಷದಿಂದ ವಿವಾದಕ್ಕೆ ಕಾರಣವಾಗಿದ್ದ ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದಲ್ಲಿ ನಿರ್ಮಾಣ ಮಾಡಲಾಗಿದ್ದ ಪರಶುರಾಮ ಥೀಮ್ ಪಾರ್ಕಿನಲ್ಲಿ ಪರಶುರಾಮನ ನಕಲಿ ಪ್ರತಿಮೆ ಸ್ಥಾಪಿಸಲಾಗಿದೆ ಆರೋಪಿಸಿ ಈ ಪ್ರಕರಣದ ಕುರಿತು ತನಿಖೆ ಆಗಬೇಕು ಎಂದು ಕಾಂಗ್ರೆಸ್ ಹಾಗೂ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ಸದಸ್ಯರು ತೀವ್ರ ಹೋರಾಟ ಹಾಗೂ ಪ್ರತಿಭಟನೆ ನಡೆಸಿದ್ದರು.
ಕೊನೆಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಯೋಜನೆಯ ಕುರಿತು ತನಿಖೆ ನಡೆಸುವಂತೆ ಸಿಐಡಿಗೆ ನೀಡಿ ಆದೇಶಿಸಿತ್ತು. ಈ ಬೆಳವಣಿಗೆಯ ನಡುವೆ ಇದೀಗ ಮೂರ್ತಿ ನಿರ್ಮಾಣದ ಗುತ್ತಿಗೆದಾರನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪರಶುರಾಮ ಪ್ರತಿಮೆ ನಿರ್ಮಾಣದ ಹೊಣೆ ವಹಿಸಿಕೊಂಡಿದ್ದ ಬೆಂಗಳೂರಿನ ಕ್ರಿಶ್ ಆರ್ಟ್ ವರ್ಲ್ಡ್ ನ ಗುತ್ತಿಗೆದಾರ ಕೃಷ್ಣ ನಾಯಕ್ ಅವರ ವಿರುದ್ಧ ಪರಶುರಾಮನ ಕಂಚಿನ ಪ್ರತಿಮೆ ನಿರ್ಮಿಸುವುದಾಗಿ ಉಡುಪಿ ನಿರ್ಮಿತಿ ಕೇಂದ್ರದಿಂದ 1,25,50,000 ಕೋಟಿ ರೂ ಹಣ ಪಡೆದು ನಕಲಿ ಪ್ರತಿಮೆ ನಿರ್ಮಿಸಿ ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ನಲ್ಲೂರು ಕೃಷ್ಣ ಶೆಟ್ಟಿ ನೀಡಿರುವ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಕೃಷ್ಣ ನಾಯಕ್ ಅವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಈಗಾಗಲೇ ಸಿಐಡಿ ಈ ಯೋಜನೆಯ ಕುರಿತು ಪ್ರಾಥಮಿಕ ಹಂತದ ತನಿಖೆ ನಡೆಸಿದೆ. ಇದೀಗ ಪ್ರತಿಮೆ ನಿರ್ಮಾಣದ ಗುತ್ತಿಗೆದಾರನ ವಿರುದ್ಧ ಕೇಸ್ ದಾಖಲಾಗಿದ್ದು, ಈ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಂತಾಗಿದೆ











