ಕಾರ್ಕಳ: ಪೆರ್ವಾಜೆ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಯಲ್ಲಿ ಶೇ. 90 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ನಡೆಯಿತು.
ವಿದ್ಯಾಭಿಮಾನಿಗಳೂ ಹಿರಿಯರೂ ಆದ ವೈಕುಂಠ ಶೆಣೈ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಆನಂದ ನಾಯಕ್ ಮಾತನಾಡಿ, ವಿದ್ಯಾರ್ಥಿಗಳು ಮುಂದಿನ ವರ್ಷ ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿವೇತನವನ್ನು ಪಡೆಯುವಲ್ಲಿ ಪ್ರಯತ್ನಿಸಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಕಾರ್ಕಳ ರೋಟರಿ ಕ್ಲಬ್ ನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮಾತನಾಡಿ, ಅವಿನಾಶ್ ವಿ ಶೆಟ್ಟಿಯವರು ತನ್ನ ಸಣ್ಣ ವಯಸ್ಸಿನಲ್ಲಿ ಇಂಥ ಉತ್ತಮ ಕಾರ್ಯಕ್ರಮಗಳನ್ನು ನಡೆಸಲು ಅವರ ಅಮ್ಮನಿಂದ ಬಂದ ಉತ್ತಮ ಸಂಸ್ಕಾರಗಳೇ ಕಾರಣ ಎಂದರು.
ಈ ಸಂದರ್ಭದಲ್ಲಿ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅವಿನಾಶ್ ವಿ ಶೆಟ್ಟಿ, ಡಾ. ರವಿರಾಜ್ ಶೆಟ್ಟಿ, ಮಸ್ಕತ್ ಉದ್ಯಮಿ ರಾಜೇಂದ್ರ ಶೆಟ್ಟಿ ನಲ್ಲೂರು , ಸೌದಿ ಎಲೆಕ್ಟ್ರಿಕಲ್ ಇಂಜಿನಿಯರ್ ಚೇತನ್ ಕುಮಾರ್, ಉದ್ಯಮಿ ಸುಧಾಕರ ಶೆಟ್ಟಿ,ಸಮಾಜ ಸೇವಕ ಜೇಸಿ ಸಮದ್ ಖಾನ್ , ಶ್ರೀ ರಾಮಪ್ಪ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷ ಶ್ರೀಧರ್ ಸುವರ್ಣ, ಕಾರ್ಕಳ ಜೇಸಿ ಸಂಸ್ಥೆಯ ಅಧ್ಯಕ್ಷೆ ಶ್ವೇತಾ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಗೀತ ಶಿಕ್ಷಕ ಕೃಷ್ಣಪ್ಪ ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಟ್ರಸ್ಟಿನ ಮಾರ್ಗದರ್ಶಕ ವಸಂತ್ ಎಂ. ಸ್ವಾಗತಿಸಿ , ಪ್ರಾಸ್ತಾವನೆಗೈದು, ಕಾರ್ಯಕ್ರಮ ನಿರೂಪಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ವೇದಾವತಿ ವಂದಿಸಿದರು.