ಬೆಂಗಳೂರು: ಲೋಕಸಭಾ ಚುನಾವಣೆ ಬೆನ್ನಲ್ಲೇ ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರದ ಮೇಲಿನ ಸೆಸ್ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿದ್ದು,ಇದರ ಪರಿಣಾಮ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 3 ರೂ. ಹಾಗೂ ಡೀಸೆಲ್ ಮೇಲೆ 3.50 ರೂಪಾಯಿ ಬೆಲೆ ಹೆಚ್ಚಳವಾಗಿದೆ. ತಕ್ಷಣದಿಂದಲೇ ಈ ಪರಿಷ್ಕೃತ ದರ ಜಾರಿಯಾಗಲಿದೆ.
ನೂತನ ದರ ಏರಿಕೆಯಿಂದ ಬೆಂಗಳೂರಿನಲ್ಲಿ ಪೆಟ್ರೋಲ್ ದರ 88 ರೂಪಾಯಿ 84 ಪೈಸೆಯಿಂದ ಇದೀಗ 103 ರೂಪಾಯಿಗೆ ಏರಿಕೆಯಾಗಿದೆ. ಇತ್ತ 85 ರೂಪಾಯಿ 93 ಪೈಸೆಯಿದ್ದ ಡೀಸೆಲ್ ಬೆಲೆ 89 ರೂಪಾಯಿ 20 ಪೈಸೆಗೆ ಏರಿಕೆಯಾಗಿದೆ. ಸರಿಸುಮಾರು ಕಳೆದೆರಡು ವರ್ಷದಿಂದ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿತ್ತು. ಮಾರ್ಚ್ ತಿಂಗಳಲ್ಲಿ ಪೆಟ್ರೋಲ್ ಡೀಸೆಲ್ ಮೇಲಿನ ಬೆಲೆಯಲ್ಲಿ ಗರಿಷ್ಠ 2 ರೂಪಾಯಿ ಕಡಿತಗೊಂಡಿತ್ತು.
ಇದೀಗ ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಬೆಲೆ ಏರಿಕೆ ಮಾಡಿದೆ. ಗರಿಷ್ಠ 3.50 ರೂಪಾಯಿ ಏರಿಕೆ ಮಾಡಿ ಜನಸಾಮಾನ್ಯರಿಗೆ ಶಾಕ್ ನೀಡಿದೆ. ಸದ್ಯದ ಬೆಲೆ ಏರಿಕೆಯಿಂದ ಅಗತ್ಯವಸ್ತುಗಳ ಬೆಲೆಯೂ ಏರಿಕೆಯಾಗಲಿದೆ. ಆದಾಯ ಕ್ರೋಡಿಕರಿಸಲು ರಾಜ್ಯ ಸರ್ಕಾರ ಹಲವು ಮೂಲಗಳನ್ನು ಹುಡುಕುತ್ತಿದೆ. ಇದೀಗ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಿಸಿ ನೇರವಾಗಿ ಜನಸಾಮಾನ್ಯರಿಗೆ ತಟ್ಟಲಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್‌ನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಆಸಕ್ತಿ ವ್ಯಕ್ತಪಡಿಸಿತ್ತು. 2020ರಲ್ಲಿ ಕೇಂದ್ರ ಸರ್ಕಾರದಿಂದ ಈ ಪ್ರಸ್ತಾಪ ಇಡಲಾಗಿತ್ತು. ಆದರೆ ಬಹುತೇಕ ರಾಜ್ಯಗಳು ಈ ಪ್ರಸ್ತಾಪ ತಿರಸ್ಕರಿಸಿದ್ದವು.ತೈಲವನ್ನು ಜಿಎಸ್ ಟಿ ವ್ಯಾಪ್ತಿಗೆ ತಂದರೆ ಗ್ರಾಹಕರಿಗೆ ಅನುಕೂಲ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ