
ಕಾರ್ಕಳ, ನ,17: ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಸತಿ ಜೊತೆಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ದೇಶಾದ್ಯಂತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಸ್ಥಾಪಿಸಲಾಗಿದೆ. ಆದರೆ ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಅತಿಥಿ ದೈಹಿಕ ಶಿಕ್ಷಣ ಶಿಕ್ಷಕನೋರ್ವ ತನ್ನ ಧಮಾಂದತೆಯ ಪರಾಕಾಷ್ಠೆಯಿಂದ ಹಿಂದೂ ಬಾಲಕರಿಗೆ ಧರ್ಮದ ಆಚರಣೆಗಳನ್ನು ಅವಹೇಳನ ಮಾಡಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪೋಷಕರು ಹಾಗೂ ಸ್ಥಳೀಯರು ಶಾಲೆಗೆ ತೆರಳಿ ಆ ಶಿಕ್ಷಕನನ್ನು ತೀವೃ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಇತ್ತ ಶಿಕ್ಷಕನ ವಿವಾದಾತ್ಮಕ ನಡೆಯ ವಿರುದ್ಧ ಪ್ರಾಂಶುಪಾಲರು ಕಠಿಣ ಕ್ರಮಕೈಗೊಂಡಿದ್ದು, ತಾತ್ಕಾಲಿಕ ನೆಲೆಯಲ್ಲಿ ಅತಿಥಿ ಶಿಕ್ಷಕ ಮದರಶಾ.ಎಸ್,ಮಕಂದಾರ್ ಎಂಬಾತನನ್ನು ಸೇವೆಯಿಂದಲೇ ವಜಾಗೊಳಿಸಿದ್ದಾರೆ.

ದೈಹಿಕ ಶಿಕ್ಷಣ ಶಿಕ್ಷಕನಾಗಿದ್ದ ಮದರಶಾ,ಎಸ್, ಮಕಂದಾರ್ ಮಕ್ಕಳಿಗೆ ಆಟೋಟ ಚಟುವಟಿಕೆ ಅಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ಜನಿವಾರ ಹಾಕಿದವರು ಕ್ರೀಡೆಯಲ್ಲಿ ಭಾಗವಹಿಸುವಂತಿಲ್ಲ, ಅವರು ಮಧ್ಯಾಹ್ನ ನಡುರೋಡಲ್ಲಿ ಕುಡಿದು ಬೀಳುತ್ತಾರಂತೆ ಎಂದು ಕೆಲ ಪೋಷಕರು ಆರೋಪಿಸಿದ್ದು, ಇದಲ್ಲದೇ ಹಿಂದೂ ಧರ್ಮದ ತಿಲಕ, ದಾರ ಹಾಕಿದ ಮಕ್ಕಳಿಗೆ ನಿರಂತರವಾಗಿ 200ರಿಂದ 300 ಬಸ್ಕಿ ಹೊಡೆಸಿದ ಪರಿಣಾಮ ಕೆಲವು ಮಕ್ಕಳ ಕಾಲಿನ ಮೀನ ಖಂಡ ಊದಿಕೊಂಡು ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂದು ಪೋಷಕರ ಆರೋಪವಾಗಿದೆ. ಇದಲ್ಲದೇ ಈ ಶಿಕ್ಷಕನ ಕ್ರೌರ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ವೈರಲ್ ಆಗುತ್ತಿದೆ.
ಇಂತಹ ಘಟನೆಗಳಿಂದ ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಮಾತ್ರವಲ್ಲದೇ ಮಕ್ಕಳ ಹಕ್ಕು ರಕ್ಷಣಾ ಕಾಯ್ದೆ ಪ್ರಕಾರ ಮಗುವಿನ ಮೂಲಭೂತ ಶಿಕ್ಷಣ ಹಕ್ಕಿಗೆ ಅಡ್ಡಿಪಡಿಸುತ್ತದೆ. ಎಳೆ ಮಕ್ಕಳ ಮೇಲೆ ದೈಹಿಕ ಹಾಗೂ ಮಾನಸಿಕ ಹಿಂಸೆಗಳಾದಾಗ ಮಕ್ಕಳು ಶಾಲೆಯನ್ನು ತಪ್ಪಿಸುವುದಕ್ಕೆ ಮತ್ತು ಶಿಕ್ಷಣವನ್ನೇ ಬಿಡುವಷ್ಟು ಭಯ ಹುಟ್ಟಿಸುತ್ತದೆ. ಮಕ್ಕಳ ಹಕ್ಕು ರಕ್ಷಣಾ ಘಟಕ ಈ ಕೃತ್ಯ ಎಸಗಿದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ. ಈ ಆರೋಪ ಸಾಬೀತಾದಲ್ಲಿ ಆರೋಪಿಗೆ ದಂಡದ ಜೊತೆಗೆ ಜೈಲು ಶಿಕ್ಷೆಯನ್ನು ನೀಡಲು ಅವಕಾಶವಿದೆ ಎಂದು ಮಕ್ಕಳ ಹಕ್ಕು ರಕ್ಷಣಾ ಘಟಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

