ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎನ್ನುವ ಸಮೀಕ್ಷೆಗಳು ಸತ್ಯಕ್ಕೆ ದೂರವಾಗಿದ್ದು, ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ
ಭಾನುವಾರ ನಡೆದ ಸಿಎಲ್‌ಪಿ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,ನಾವು ನಮ್ಮ ಮತದಾರರನ್ನು ನಂಬುತ್ತೇವೆ. ನಮ್ಮ ಗ್ಯಾರಂಟಿಗಳು ಕರ್ನಾಟಕದಲ್ಲಿ 15 ಸ್ಥಾನಗಳನ್ನು ಗೆಲ್ಲಿಸುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಕಡಿಮೆ ಸ್ಥಾನಗಳನ್ನು ನೀಡುತ್ತಿರುವ ಈ ಎಕ್ಸಿಟ್ ಪೋಲ್ ಸಂಖ್ಯೆಯನ್ನು ನಾವು ಹೇಗೆ ಒಪ್ಪಿಕೊಳ್ಳಬಹುದು? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲೂ ಕಾಂಗ್ರೆಸ್ ಎರಡಂಕಿ ದಾಟಲ್ಲ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಇದು ಕೈ ಶಾಸಕರಲ್ಲಿ ಕಳವಳ ತಂದಿಟ್ಟಿದೆ. ಹೀಗಾಗಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಿಎಂ ಸಿದ್ದರಾಮಯ್ಯ ಭಾನುವಾರ ರಾತ್ರಿ ಶಾಸಕಾಂಗ ಸಭೆ ಕರೆದಿದ್ದರು. ಸಭೆಯಲ್ಲಿ ಮತದಾನೋತ್ತರ ಸಮೀಕ್ಷಾ ವರದಿ, ಲೋಕಸಭೆ ಚುನಾವಣೆ ಫಲಿತಾಂಶ, ಎಂಎಲ್ಸಿ ಚುನಾವಣೆ, ಮುಂದಿನ ಸಾಧ್ಯ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಗಿದೆ. ಕರ್ನಾಟಕದಲ್ಲಿ 18-20 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಹಲವಾರು ಕಾಂಗ್ರೆಸ್ ಶಾಸಕರು ತಮ್ಮ ನಾಯಕ ರಾಹುಲ್ ಗಾಂಧಿಯವರ ಭಾವನೆಯನ್ನು ಪ್ರತಿಧ್ವನಿಸಿದರು, ಅವರು ಎಕ್ಸಿಟ್ ಪೋಲ್ ಫಲಿತಾಂಶಗಳು ಫ್ಯಾಂಟಸಿಯಂತೆ ತೋರುತ್ತದೆ ಎಂದು ಹೇಳಿದರು. ಎಕ್ಸಿಟ್ ಪೋಲ್ ಸಂಖ್ಯೆಗಳು ತುಂಬಾ ಕಾಲ್ಪನಿಕವಾಗಿವೆ, ಹೀಗಾಗಿ ನಾವು ಸ್ವೀಕರಿಸುವುದಿಲ್ಲ ಎಂದು ಅವರು ಹೇಳಿದರು.