ಬೆಂಗಳೂರು: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಗೆ ರಾಜ್ಯದಲ್ಲಿ ಸಿದ್ಧತೆಗಳು ನಡೆಯುತ್ತಿದ್ದು, ಭಾರತ ಚುನಾವಣಾ ಆಯೋಗ (ಇಸಿಐ) ದಿನಾಂಕಗಳನ್ನು ಘೋಷಿಸಿದ ನಂತರ ಪರಿಷ್ಕರಣೆ ಕಾರ್ಯ ಆರಂಭವಾಗಲಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬು ಕುಮಾರ್ ಅವರು ಹೇಳಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಆಯೋಜಿಸಲಾದ ಮಾಧ್ಯಮ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕಳೆದ ಒಂದು ತಿಂಗಳಿನಿAದ ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗೆ ಸಿದ್ಧತೆಗಳು ನಡೆಯುತ್ತಿವೆ. ಇದರ ಭಾಗವಾಗಿ, ನಗರಗಳು ಮತ್ತು ಹಳ್ಳಿಗಳಲ್ಲಿ 58,000 ಬ್ಲಾಕ್ ಮಟ್ಟದ ಅಧಿಕಾರಿಗಳಿಗೆ ಸೆಪ್ಟೆಂಬರ್ 23 ರೊಳಗೆ ತರಬೇತಿ ಪೂರ್ಣಗೊಳ್ಳಲಿದೆ. ಇಸಿಐ ದಿನಾಂಕಗಳನ್ನು ಘೋಷಿಸಿದ ನಂತರ ಪರಿಷ್ಕರಣಾ ಕಾರ್ಯ ಆರಂಭಿಸಲು ಸಿದ್ಧರಿದ್ದೇವೆ. ಯಾವುದೇ ಅರ್ಹ ಮತದಾರರು ಹೊರಗುಳಿಯದಂತೆ ಮತ್ತು ಅನರ್ಹ ಮತದಾರರನ್ನು ಸೇರಿಸದಂತೆ ಖಚಿತಪಡಿಸಿಕೊಳ್ಳಲು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕದಲ್ಲಿ 2002ರಲ್ಲಿ ವಿಶೇಷ ತೀವ್ರ ಪರಿಷ್ಕರಣೆ ನಡೆಸಲಾಗಿತ್ತು. ಮತದಾರರ ಪಟ್ಟಿಯನ್ನು ಈಗಾಗಲೇ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ, 2002 ರಲ್ಲಿ 3.4 ಕೋಟಿ ಮತದಾರರಿದ್ದರು, ಈ ಸಂಖ್ಯೆ ಇದೀಗ 5.4 ಕೋಟಿಯಾಗಿದೆ. ಹೀಗಾಗಿ ವ್ಯತ್ಯಾಸಗಳನ್ನು ಗುರುತಿಸಲು, ಪ್ರಸ್ತುತ 2025 ರ ಡೇಟಾವನ್ನು 2002ರ ಡೇಟಾದೊಂದಿಗೆ ಹೋಲಿಕೆ ಮಾಡಲಾಗುತ್ತದೆ ಎಂದು ಹೇಳಿದರು.