ಕಾರ್ಕಳ:ಸಮಾಜ ಹಾಗೂ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸುವ ಹೊಣೆಗಾರಿಕೆ ಮಾಧ್ಯಮದ ಮೇಲಿದೆ. ಪತ್ರಕರ್ತರು ಭಾಷೆ.ಪಂಗಡ,ಧರ್ಮಾತೀತವಾಗಿ, ರಾಜಕೀಯ ಪಕ್ಷಗಳ ಸಿದ್ದಾಂತಗಳಿಗೆ ಅಂಟದೇ ನಿಷ್ಠುರವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಅಶ್ವಥ್ ಎಸ್.ಎಲ್ ಹೇಳಿದರು.
ಅವರು ಕಾರ್ಕಳ ತಾಲೂಕು ಪತ್ರಕರ್ತರ ಸಂಘ ಹಾಗೂ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯಲ್ಲಿ ಜು.23 ರಂದು ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರು ಯಾವುದೇ ಪೂರ್ವಾಗ್ರಹಪೀಡಿತರಾಗದೇ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ರಚನಾತ್ಮಕ ಕೆಲಸ ಮಾಡಬೇಕು ಎಂದರು. ಕನ್ನಡ ಸಾಹಿತ್ಯ ಬೆಳೆಸುವ ಹಾಗೂ ಪತ್ರಿಕೆಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರಿಯೇಟಿವ್ ಸಂಸ್ಥೆ ಸದಾ ನಿಮ್ಮೊಂದಿಗೆ ಇದೆ ಎಂದರು. ಕ್ರಿಯೇಟಿವ್ ಹೊಂಗಿರಣ ಕಾರ್ಯಕ್ರಮದ ಮೂಲಕ ನಮ್ಮ ಸಂಸ್ಥೆ 6 ಕೋಟಿ ವಿದ್ಯಾರ್ಥಿ ವೇತನ ವಿತರಣೆ, ಪುಸ್ತಕ ಮನೆಯ ಮೂಲಕ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸುವ ಕೆಲಸ ಮಾಡಿದೆ ಎನ್ನುವ ಹೆಮ್ಮೆಯಿದೆ ಎಂದರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಮಹಾಬಲೇಶ್ವರ ಭಟ್ ಮಾತನಾಡಿ, ಓದುವವರ ಸಂಖ್ಯೆ ಕಡಿಮೆಯಾಗಿದೆ,ನೋಡುವವರ ಸಂಖ್ಯೆ ಜಾಸ್ತಿಯಾಗಿದೆ.ಅಂದರೆ ಪತ್ರಿಕೆಗಳ ಓದುಗರು ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ.ಯುವಜನತೆ ಡಿಜಿಟಲ್ ಮಾಧ್ಯಮಕ್ಕೆ ಒತ್ತಿ ಹೋಗಿದ್ದರೂ ಸುದ್ದಿಗಳ ವಿಶ್ವಾಸಾರ್ಹತೆಯಲ್ಲಿ ಪತ್ರಿಕೆಗಳು ಇಂದಿಗೂ ಓದುಗ ಬಳಗವನ್ನು ಹೊಂದಿದೆ ಎಂದರು. ಇಂದು AI ತಂತ್ರಜ್ಞಾನದಿಂದಾಗಿ ಪತ್ರಿಕೋದ್ಯಮದ ಭಾರ ಕಡಿಮೆಯಾಗಿದೆ. ಕೃತಕಬುದ್ದಿಮತ್ತೆ ತಂತ್ರಜ್ಞಾನದಿಂದ ಪತ್ರಕರ್ತರ ಒತ್ತಡ ಕಡಿಮೆಯಾಗಬಹುದಾದರೂ ಯಾಂತ್ರಿಕ ಬುದ್ಧಿಮತ್ತೆಗಿಂತ ಮನುಷ್ಯನ ಸೃಜನಾತ್ಮಕ ಬುದ್ದಿಮತ್ತೆ ಮೇಲು ಎಂದರು. ಇಂದು ಪತ್ರಿಕೆಗಳು ಉದ್ಯಮವಾಗಿದೆ. ಕಾರ್ಪೋರೆಟ್ ವಲಯದಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿ ಲಾಭ ಗಳಿಸುವ ಉದ್ಯಮವಾಗಿದೆ.ಸುಳ್ಳು ಸುದ್ದಿ ಪ್ರಸಾರ ಮಾಡುವವರು, ಭಟ್ಟಂಗಿಗಳು, ಪೂರ್ವಾಗ್ರಹಪೀಡಿತರಾಗಿ ವರದಿ ಮಾಡುವ ಪತ್ರಕರ್ತರ ನಡುವೆಯೂ ಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡುವ,ಜನೋಪಯೋಗಿ ಕೆಲಸ ಮಾಡುವ ಪತ್ರಕರ್ತರು ನಮ್ಮೊಂದಿಗೆ ಇದ್ದಾರೆ ಎಂದರು.
ಕಾರ್ಕಳ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಪ್ರಸನ್ನ ಮಾತನಾಡಿ, ಪತ್ರಿಕೆಗಳು ಬರವಣಿಗೆ ಹಾಗೂ ಭಾಷಾ ಪ್ರಯೋಗಕ್ಕೆ ಸಹಕಾರಿಯಾಗುತ್ತದೆ. ಬದುಕಿನಲ್ಲಿ ಸಾಧನೆ ಮಾಡಲು ಪತ್ರಿಕೆಗಳು ಸಹಕಾರಿ.ಪತ್ರಿಕೆಗಳು ಇಂದಿಗೂ ತಮ್ಮ ವಿಶ್ವಾಸಾರ್ಹತೆ ಉಳಿದುಕೊಂಡಿವೆ.ಪತ್ರಿಕೆಗಳು ಆಡಳಿತ ಹಾಗೂ ಇಲಾಖೆಗಳ ಲೋಪಗಳನ್ನು ಎತ್ತಿತೋರಿಸುವ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತಿವೆ ಎಂದರು.
ಹಿರಿಯ ಪತ್ರಿಕಾ ವಿತರಕ ಸದಾನಂದ ಪಾಟ್ಕರ್ ಅವರನ್ನು ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಕಾರ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ಕಾರ್ಯದರ್ಶಿ ಹರೀಶ್ ಆಚಾರ್ಯ,ಕೋಶಾಧಿಕಾರಿ ಕೆ.ಎಂ ಖಲೀಲ್, ಉದಯ ಮುಂಡ್ಕೂರು ಉಪಸ್ಥಿತರಿದ್ದರು.
ವಾಸುದೇವ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು.
ಶಿಕ್ಷಕಿ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು.