ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು 75ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮೋದಿ ಅವರಿಗೆ ಆಡಳಿತ ಪಕ್ಷ ಮತ್ತು ವಿಪಕ್ಷ ನಾಯಕರು ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟ, ರಾಜಕೀಯ ನಾಯಕರು ಪ್ರಧಾನಿ ಮೋದಿ ಅವರಿಗೆ ಜನ್ಮದಿನದ ಶುಭಾಶಯ ಸಂದೇಶ ಕಳುಹಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದು, ಜಾಗತಿಕ ನಾಯಕರೂ ಶುಭಾಶಯ ಸಂದೇಶಗಳನ್ನು ಕಳುಹಿಸಿದ್ದಾರೆ. ಭೌಗೋಳಿಕ ರಾಜಕಾರಣದ ಭೂಪಟದಲ್ಲಿ ಭಾರತಕ್ಕೆ ಮಹತ್ವದ ಸ್ಥಾನ ಲಭಿಸುವಲ್ಲಿ ಪ್ರಧಾನಿ ಮೋದಿ ಅವರ ಪಾತ್ರವನ್ನು, ಜಾಗತಿಕ ನಾಯಕರು ಕೊಂಡಾಡುತ್ತಿದ್ದಾರೆ.
ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು, ಪುರಿಯಲ್ಲಿ ಪ್ರಧಾನಿ ಮೋದಿಯವರ ಕಲಾಕೃತಿಯನ್ನು ಮರಳಿನಲ್ಲಿ ರಚಿಸಿ ಅವರ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ್ದಾರೆ.
ಪ್ರಧಾನಿ ಮೋದಿ 1950 ರ ಸೆಪ್ಟೆಂಬರ್ 17 ರಂದು ಗುಜರಾತ್‌ನ ಸಣ್ಣ ಪಟ್ಟಣವಾದ ವಡ್ನಗರದಲ್ಲಿ ಜನಿಸಿದರು. ಅವರ ಬಾಲ್ಯವು ತೀವ್ರ ಬಡತನದಲ್ಲಿ ಕಳೆದಿತು. ಅವರು ತಮ್ಮ ತಂದೆ ದಾಮೋದರದಾಸ್ ಮುಲ್ಚಂದ್ ಮೋದಿ ಅವರೊಂದಿಗೆ ವಡ್ನಗರ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಾಟ ಮಾಡುತ್ತಿದ್ದರು. ಅವರ ತಾಯಿ ಹೀರಾಬೆನ್ ಒಬ್ಬ ಸಾಮಾನ್ಯ ಗೃಹಿಣಿ. ಒಟ್ಟು ನಾಲ್ಕು ಮಕ್ಕಳಲ್ಲಿ ಪ್ರಧಾನಿ ಮೋದಿ ಮೂರನೇಯವರು.
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಪ್ರಚಾಕರಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವಂತೆ ದೇಶ ಸುತ್ತುತ್ತಿದ್ದ ನರೇಂದ್ರ ಮೋದಿ, ಭಾರತದ ಪ್ರಧಾನಿಯಾದ ಬಳಿಕವೂ ಅದೇ ಹುಮ್ಮಸ್ಸಿನಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ.
ತಮ್ಮ ರಾಜಕೀಯದ ಆರಂಭದ ದಿನಗಳಿಂದಲೂ ಪ್ರಧಾನಿ ಮೋದಿ ಅವರು ಪಾದರಸದಂತೆ ಕೆಲಸ ಮಾಡುತ್ತಾ ಬಂದಿರುವುದನ್ನು ಕಾಣಬಹುದು. 1990ರಲ್ಲಿ ಅವರು ಗುಜರಾತ್‌ನಿಂದ “ಸೋಮನಾಥ-ಅಯೋಧ್ಯೆ ರಥಯಾತ್ರೆ”ಯನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. 1991-92ರಲ್ಲಿ “ಏಕತಾ ಯಾತ್ರೆ” ನೇತೃತ್ವವಹಿಸಿದ್ದ ಪ್ರಧಾನಿ ಮೋದಿ, ಶ್ರೀನಗರದ ಲಾಲ್‌ಚೌಕ್‌ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸುವಲ್ಲಿ ಯಶಸ್ವಿಯಾಗಿದ್ದರು.
ದೇಶದ ಪ್ರಧಾನಿಯಾಗಿ ಕಳೆದ 11 ವರ್ಷಗಳಲ್ಲಿ ಪ್ರಧಾನಿ ಮೋದಿ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಅಲ್ಲದೇ ಈ ಕಾರ್ಯಕ್ರಮಗಳ ಪ್ರಯೋಜನ ಜನರಿಗೆ ತಲುಪಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಲು ಖುದ್ದು ದೇಶಾದ್ಯಂತ ಪ್ರವಾಸ ಮಾಡಿದ್ದಾರೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹೀಗೆ ಭಾರತದ ಮೂಲೆ ಮೂಲೆಯನ್ನೂ ತಲುಪಿರುವ ಪ್ರಧಾನಿ ಮೋದಿ, ಜನನಾಯಕನಾಗಿ ಬೆಳೆದು ಬಂದ ಪರಿ ಅನನ್ಯ. ತಮ್ಮ ಕಾರ್ಯವೈಖರಿಯಿಂದ ರಾಜಕೀಯ ವಿರೋಧಿಗಳಿಗೂ ಇಷ್ಟವಾಗುವ ಪ್ರಧಾನಿ ಮೋದಿ, ಇದೇ ಕಾರಣಕ್ಕೆ ಇಂದು ಎಲ್ಲಾ ರಾಜಕೀಯ ನಾಯಕರಿಂದಲೂ ಜನ್ಮದಿನದ ಶುಭಾಶಯಗಳನ್ನು ಸ್ವೀಕರಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಜನ್ಮದಿನ ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಗುತ್ತಿದೆ.