ಮಡಿಕೇರಿ: ಕಳೆದ 10 ವರ್ಷಗಳಿಂದ ಕೊಟ್ಟಿರುವ ಭರವಸೆಗಳನ್ನೇ ಪ್ರಧಾನಿ ಮೋದಿಯವರು ಈಡೇರಿಸಿಲ್ಲ. ಇನ್ನು ಮುಂದಿನ ಭರವಸೆಗಳನ್ನು ಈಡೇರಿಸುತ್ತಾರಾ, ಬಿಜೆಪಿ ನೀಡಿರುವ ಭರವಸೆಗಳ ಬಗ್ಗೆ ಯಾವುದೇ ಗ್ಯಾರಂಟಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಕೊಡಗಿನಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿ, ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದರು. 2 ಕೋಟಿ ಉದ್ಯೋಗ ಸೃಷ್ಟಿಸಿದ್ದಾರಾ? ಮೇಕ್ ಇನ್ ಇಂಡಿಯಾ ಮಾಡುತ್ತೇವೆ ಎಂದಿದ್ದರು. ಮೇಕ್ ಇನ್ ಇಂಡಿಯಾ ಮಾಡಿದ್ದಾರಾ? ಅಚ್ಛೇದಿನ್ ಆಯೇಗಾ ಎಂದಿದ್ದರು, ಅಚ್ಛೇದಿನ್ ಬಂತಾ ಎಂದು ಪ್ರಶ್ನಿಸಿದ್ದಾರೆ.
ಎಲ್ಲಾ ಅಗತ್ಯ ವಸ್ತುಗಳ ಬೆಲೆ ಕಡಿಮೆ ಆಗಿದೆಯೇ? 2018 ರಲ್ಲಿಯೂ ಬಿಜೆಪಿ ಹಲವು ಭರವಸೆಗಳನ್ನು ನೀಡಿತ್ತು. ಅದರಲ್ಲಿ ಎಷ್ಟೋ ಭರವಸೆಗಳು ಇನ್ನೂ ಈಡೇರಿಸಿಲ್ಲ. ಬಿಜೆಪಿ ಯಾವತ್ತೂ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. 25 ಕೋಟಿ ಉದ್ಯೋಗ ಸೃಷ್ಟಿಸಿದ್ದೇವೆ ಎನ್ನುತ್ತಾರೆ. ನಿಮಗೆ ಉದ್ಯೋಗ ಸಿಕ್ಕಿದೆಯಾ ಎಂದು ಅಲ್ಲಿದ್ದ ಯುವಕರನ್ನು ಪ್ರಶ್ನಿಸಿದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಯಿಂದ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ ಎಂಬ ಮಾಜಿ ಸಿಎಂ ಹೆಚ್‍ಡಿಕೆ ಹೇಳಿಕೆಗೆ, ದಾರಿತಪ್ಪಿದ್ದಾರೆ ಎಂದರೆ ಏನರ್ಥ ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದವರು. ಹೆಣ್ಣುಮಕ್ಕಳ ಬಗ್ಗೆ ಹೀಗೆ ಮಾತನಾಡಿದರೆ ಹೇಗೆ? ಹೆಣ್ಣುಮಕ್ಕಳು ಇದನ್ನು ಸಹಿಸಿಕೊಳ್ಳುತ್ತಾರಾ ಎಂದರು, ಬೆಲೆ ಹೆಚ್ಚಳ ಮಾಡಿ ಗ್ಯಾರಂಟಿ ಯೋಜನೆ ಮಾಡಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಮಾತಿಗೆ, ಮದ್ಯ ಹಾಗೂ ಸ್ಟಾಂಪ್ ಡ್ಯೂಟಿ ದರ ಹೆಚ್ಚಳದಿಂದ ಸರ್ಕಾರಕ್ಕೆ ಎಷ್ಟು ಆದಾಯ ಬರುತ್ತದೆ ಎಂದು ವಿಜಯೇಂದ್ರಗೆ ಗೊತ್ತಾ? ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ 58 ಸಾವಿರ ಕೋಟಿ ರೂಪಾಯಿ ಬೇಕು. ದರ ಹೆಚ್ಚಳದಿಂದ ಸರ್ಕಾರಕ್ಕೆ ಇಷ್ಟು ಆದಾಯ ಬರುತ್ತಾ, ಸುಮ್ಮನೇ ಏನೋ ಹೇಳಬೇಕು ಎಂದು ಹೇಳುವುದಲ್ಲ ಎಂದು ತಿರುಗೇಟು ನೀಡಿದರು.