Share this news

ಬೆಂಗಳೂರು :ರಾಜಕೀಯವಾಗಿ ಸಂಕಷ್ಟ ಎದುರಾದಾಗಲೆಲ್ಲ ಜಾತಿ ಗಣತಿ ವರದಿ ಜಾರಿ ವಿಚಾರ ಪ್ಸ್ತಾಪಿಸಿ ಹಿಂದುಳಿದ ಹಾಗೂ ಶೋಷಿತ ವರ್ಗದ ದಾರಿ ತಪ್ಪಿಸಿವುದು ಸಿಎಂ‌ ಸಿದ್ದರಾಮಯ್ಯ ಅವರಿಗೆ ಚಟವಾಗಿ ಬಿಟ್ಟಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯನವರಿಗೆ ಜಾತಿ ಗಣತಿ ವರದಿ ಎನ್ನುವುದು ಖುರ್ಚಿ ಭದ್ರಪಡಿಸಿಕೊಳ್ಳುವುದಕ್ಕಾಗಿ ಇರುವ ಅತಿದೊಡ್ಡ ಅಸ್ತ್ರವಾಗಿದೆ. ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ಜಾರಿ, ಅಹಿಂದ ವರ್ಗಕ್ಕೆ ಅನ್ಯಾಯ ಎಂದು ಭಾಷಣ ಬಿಗಿದು ನಾಟಕವಾಡುವುದು ಅವರಿಗೆ ಚಾಳಿಯಾಗಿ ಬಿಟ್ಟಿದೆ. ಪೊಲೀಸ್ ಭಾಷೆಯಲ್ಲಿ ಹೇಳಬೇಕೆಂದರೆ ಇದು ವೃತ್ತಿಪರ ಆರೋಪಿ ಎಸಗುವ ” ಗಮನ ಸೆಳೆಯುವ ತಂತ್ರ” ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯನವರು ಹಾದಿ ತಪ್ಪಿಸುವುದರಲ್ಲಿ ಅತ್ಯಂತ ನಿಸ್ಸೀಮರು, ಇಡಿ ಕರ್ನಾಟಕವನ್ನು ತಮ್ಮ ರಾಜಕೀಯ ಜೀವನದ ನಾಲ್ಕು ದಶಕಗಳಿಂದ ಹಾದಿ ತಪ್ಪಿಸುತ್ತಲೇ ಬಂದಿದ್ದಾರೆ.
ರಾಜಕೀಯ ದಿಗ್ಗಜರಾದ ರಾಮಕೃಷ್ಣ ಹೆಗಡೆ, ದೇವೇಗೌಡ, ಎಸ್.ಎಂ.ಕೃಷ್ಣರಂಥ ಘಟಾನುಘಟಿಗಳನ್ನೇ ದಿಕ್ಕುತಪ್ಪಿಸಿ ರಾಜಕೀಯವಾಗಿ ಬೆಳೆದ ನಿಮಗೆ ಈ ವಿಚಾರಕ್ಕೆ ಯಾವುದಾದರೂ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ನೀಡಬೇಕಿದೆ ಎಂದು ಟೀಕಿಸಿದ್ದಾರೆ.
ಮುಡಾ ವಿಚಾರದಲ್ಲಿ ಸಂಕಷ್ಟ ಎದುರಾಗುತ್ತಿದ್ದಂತೆ ನೀವು ಜಾತಿ ಗಣತಿ ವಿಚಾರವನ್ನು ಮುಂದಿಟ್ಟುಕೊಂಡು ಹಿಂದುಳಿದ ಹಾಗೂ ಶೋಷಿತ ವರ್ಗದ ದಿಕ್ಕು ತಪ್ಪಿಸಲು ಹೊರಟಿದ್ದೀರಿ. ಎಷ್ಟು ದಿನ ಈ ನಾಟಕ ? ಅಧಿಕಾರಕ್ಕೆ ಬಂದಾಗಿನಿಂದ ಜಾತಿ ಗಣತಿ ಅನುಷ್ಠಾನ ಮಾಡುತ್ತೇನೆ ಎಂದು ಹೇಳುತ್ತಲೇ ಬಂದಿದ್ದೀರೇ ವಿನಾ ಆ ದಿಶೆಯಲ್ಲಿ ಒಂದೇ ಒಂದು ಹೆಜ್ಜೆ ಮುಂದಿಟ್ಟಿಲ್ಲ. ಹಲವು ಕಾರಣದಿಂದ ಜಾರಿಯಾಗಿಲ್ಲ ಎಂದು ಸುಮ್ಮನೆ ಹೇಳಿದರೆ ಸಾಕೆ ? ಆ ಕಾರಣವನ್ನು ಬಹಿರಂಗಪಡಿಸಿ. ನಿಮಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಭಯವೇ ? ಅಥವಾ ವರದಿಯಲ್ಲಿ ಲೋಪಗಳಿವೆಯೇ ? ಯಾವುದನ್ನೂ ಸ್ಪಷ್ಟಪಡಿಸದೇ ” ಜಾರಿ ಜಪ” ಎಷ್ಟು ವರ್ಷ ಮುಂದುವರಿಸುತ್ತೀರಿ ಎಂದು ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.

                       in 

Leave a Reply

Your email address will not be published. Required fields are marked *