ಕಾರ್ಕಳ: ಜಿಲ್ಲಾಡಳಿತ ಹಾಗೂ ಕಾರ್ಕಳ ತಾಲೂಕು ಆಡಳಿತಗಳ ಸಹಯೋಗದಲ್ಲಿ ಶುಕ್ರವಾರ ನಡೆದ ಜನಸ್ಪಂದನ ಸಭೆಯಲ್ಲಿ ಪುರಸಭಾ ಸದಸ್ಯ ಶುಭದ ರಾವ್ ಅವರ ಜತೆ ಅನುಚಿತವಾಗಿ ವರ್ತಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಶನಿವಾರ ಕಾರ್ಕಳ ಕಾಂಗ್ರೆಸ್ ಪಕ್ಷದ ವತಿಯಿಂದ ಡಿವೈಎಸ್ಪಿ ಅರವಿಂದ ಕಲಗುಜ್ಜಿ ವಿರುದ್ಧ ವಿನೂತನ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ನೇತೃತ್ವದಲ್ಲಿ ಕಾಂಗ್ರೆಸ್ ಕಚೇರಿಯಿಂದ ಡಿವೈಎಸ್ಪಿ ಕಚೇರಿಯವರೆಗೆ ನಡಿಗೆಯ ಮೂಲಕ ಬಂದು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯೋಣ ಎನ್ನುವ ಬರಹದ ಮೂಲಕ ಡಿವೈಎಸ್ಪಿ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್ ಮಾತನಾಡಿ, ಜನರು ತಮ್ಮ ನೋವನ್ನು ತೋಡಿಕೊಳ್ಳಲು ಜನಸ್ಪಂದನ ಸಭೆಗೆ ಬಂದರೆ ಅವರ ಸಮಸ್ಯೆಗೆ ಸ್ಪಂದಿಸುವ ಬದಲು ಡಿವೈಎಸ್ಪಿ ಅವರ ಮೇಲೆ ದೌರ್ಜನ್ಯ ಎಸಗಿ ಧ್ವನಿ ಅಡಗಿಸುವ ಪ್ರಯತ್ನ ಮಾಡಿರುವುದು ಖಂಡನೀಯ. ಜನರಿಗೆ ರಕ್ಷಣೆ ನೀಡುವ ಡಿವೈಎಸ್ಪಿಯವರು ಬಿಜೆಪಿ ಕಾರ್ಯಕರ್ತರೇ? ಅಥವಾ ಶಾಸಕರು ನೇಮಿಸಿಕೊಂಡ ಬೌನ್ಸರೇ? ಎಂದು ಪ್ರಶ್ನಿಸಿದರು. ಕಾರ್ಕಳ ಎನ್ನುವುದು ಪ್ರೀತಿ, ತ್ಯಾಗ ಹಾಗೂ ಅಹಿಂಸೆಯ ಸಂದೇಶ ಸಾರುವ ಊರು, ಆದರೆ ಇಂತಹ ಊರಿನಲ್ಲಿ ಡಿವೈಎಸ್ಪಿಯವರು ತಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳಬೇಕು, ಓರ್ವ ಜನಪ್ರತಿನಿಧಿಯ ಮೇಲೆ ದೌರ್ಜನ್ಯ ನಡೆಸಿದರೆ, ಇನ್ನು ಜನಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದರು.
ಕಾರ್ಕಳದಲ್ಲಿ ಅಶಾಂತಿ ಸೃಷ್ಟಿಸಲು ಶಾಸಕರು ಕಾರಣರಾಗಿದ್ದಾರೆ, ಶಾಸಕರ ತಾಳಕ್ಕೆ ಕುಣಿಯುವ ಅಧಿಕಾರಿಗಳು ಮಾತ್ರ ಕಷ್ಟ ಅನುಭವಿಸುವಂತಾಗಿದೆ. ಅಧಿಕಾರಿಗಳ ಜತೆ ನಮ್ಮ ಸರ್ಕಾರ ಸದಾ ಇದೆ, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ನಾವು ಸದಾ ಬದ್ದರಿದ್ದೇವೆ ಎಂದು ಶುಭದ ರಾವ್ ಭರವಸೆ ನೀಡಿದರು.
ಉದಯ ಶೆಟ್ಟಿ ಮುನಿಯಾಲು ಮಾತನಾಡಿ, ಪರಶುರಾಮನ ಮೂರ್ತಿಯ ವಿಚಾರವಾಗಿ ನ್ಯಾಯ ಕೇಳಲು ಬಂದವರ ಮೇಲೆ ದೌರ್ಜನ್ಯ ಎಸಗಿರುವುದು ಖಂಡನೀಯ, ಇಂತಹ ವರ್ತನೆ ಶಾಸಕರಿಗೆ ಶೋಭೆ ತರುವುದಿಲ್ಲ, ಅಧಿಕಾರಿಗಳು ಜನರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕೆಂದರು.
ಇದಾದ ಬಳಿಕ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಗುಲಾಬಿ ಹೂವು ನೀಡಿ ದ್ವೇಷ ಮರೆತು ಪರಸ್ಪರ ಹಸ್ತಲಾಘವ ನೀಡಿ ನಗು ಮೊಗದಿಂದ ಪ್ರತಿಭಟನೆ ಅಂತ್ಯಗೊಳಿಸಿದರು.