ಕಾರ್ಕಳ, ಸೆ.10: ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸುವ ಷಡ್ಯಂತ್ರ ನಿರಂತರವಾಗಿ ನಡೆಯುತ್ತಿದ್ದು ಇದು ಖಂಡನೀಯ. ನಮ್ಮ ಧಾರ್ಮಿಕ ಶ್ರದ್ಧಾಕೇಂದ್ರಗಳ ಮೇಲಿನ ದಬ್ಬಾಳಿಕೆಯನ್ನು ನಾವೆಲ್ಲರೂ ಒಗ್ಗಟ್ಟಾಗಿ ಖಂಡಿಸಬೇಕಿದೆ ಎಂದು SCDCC ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದರು.
ಅವರು ಕಾರ್ಕಳ ಕುಕ್ಕುಂದೂರು ಮೈದಾನದಲ್ಲಿ ಧರ್ಮಸ್ಥಳ ಸಂರಕ್ಷಣಾ ಸಮಿತಿ ವತಿಯಿಂದ ನಡೆದ ಜನಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಜನಜಾಗೃತಿ ಸಭೆಯಲ್ಲಿ ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ,ಧರ್ಮಸ್ಥಳ ಕ್ಷೇತ್ರದ ವಿರುದ್ಧ ಇಂತಹ ಗುರುತರ ಅಪವಾದ ಸರಿಯಲ್ಲ.ಸರ್ವ ಧರ್ಮ ಸಮನ್ವಯ ಕ್ಷೇತ್ರವಾಗಿರುವ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಎಂದಿಗೂ ಇಂತಹ ಆರೋಪ ಅಪಮಾನ ಬಂದಿಲ್ಲ. ಧರ್ಮಸ್ಥಳದ ಎರಡು ಶಕ್ತಿಗಳು ವೀರೇಂದ್ರ ಹೆಗ್ಗಡೆಯವರನ್ನು ರಕ್ಷಿಸುತ್ತಿವೆ ಎಂದರು.
ಪತ್ರಕರ್ತ ಜಿತೇಂದ್ರ ಕುಂದೇಶ್ವರ ಮಾತನಾಡಿ, ಚಿನ್ನಯ್ಯನ ತಲೆಬುರುಡೆ ಪ್ರಕರಣದ ವಿಚಾರದಲ್ಲಿ ವಿದೇಶದಲ್ಲಿ ಕುಳಿತುಕೊಂಡು ಸಂಚು ರೂಪಿಸಲಾಗಿದೆ.ಹಿಂದೂ ಧರ್ಮ ಕ್ಷೇತ್ರಗಳನ್ನು ಜಾತಿಗಳ ಆಧಾರದಲ್ಲಿ ವಿಭಜಿಸುವ ಮಹಾ ಸಂಚು ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ.ಇದರ ಕುರಿತು ಇಡೀ ಹಿಂದೂ ಸಮಾಜ ಈ ಕುರಿತು ಎಚ್ಚರಿಕೆಯಿಂದ ಇರಬೇಕು ಎಂದರು.
ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಧರ್ಮಸ್ಥಳ ಕ್ಷೇತ್ರದ ನಂಬಿಕೆಯನ್ನು ದುರ್ಬಲಗೊಳಿಸುವ ಹಾಗೂ ಅರಾಜಕತೆ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ಧರ್ಮಸ್ಥಳ ಕ್ಷೇತ್ರದ ಕುರಿತು ಅಪಪ್ರಚಾರ ನಡೆಸುವ ವಿಚಾರದಲ್ಲಿ ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಪೂರ್ವತಯಾರಿ ನಡೆದಿದೆ. ಹಿಂದೂಗಳಲ್ಲಿನ ಒಗ್ಗಟ್ಟು ಮುರಿಯಲು ಅತ್ಯಂತ ವ್ಯವಸ್ಥಿತವಾದ ಷಡ್ಯಂತ್ರ. ಸೌಜನ್ಯ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕಿದೆ.ಆದರೆ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಯಾಕೆ ಮಾಡಬೇಕು ಎಂದು ಅವರು ಪ್ರಶ್ನಿಸಿದರು.
ಧರ್ಮಸ್ಥಳ ಕ್ಷೇತ್ರದ ಧಾರ್ಮಿಕ ನಂಬಿಕೆ ಕುರಿತು ಎಸ್ಐಟಿ ಅಥವಾ ತನಿಖಾ ಸಂಸ್ಥೆಗಳ ಕ್ಲೀನ್ ಚಿಟ್ ಬೇಕಿಲ್ಲ ಕೋಟ್ಯಂತರ ಭಕ್ತರ ಭಕ್ತಿ ಇದ್ದರೆ ಸಾಕು ಎಂದರು.
ಸಮೀರ್ ಯೂಟ್ಯೂಬ್ ನಲ್ಲಿ AI ವಿಡಿಯೋ ಮಾಡಿ ಅಪಪ್ರಚಾರ ನಡೆಸಿದಾಗಲೇ ಹಿಂದೂಗಳು ಎಚ್ಚೆತ್ತುಕೊಳ್ಳಬೇಕಿತ್ತು. ಎಡಪಂಥೀಯರು ಹಾಗೂ ನಗರ ನಕ್ಸಲರ ಷಡ್ಯಂತ್ರದ ಭಾಗವೇ ಧರ್ಮಸ್ಥಳ ಧಾರ್ಮಿಕ ಕ್ಷೇತ್ರದ ಮೇಲಿನ ದಾಳಿಯಾಗಿದೆ. ಸಜ್ಜನರು ಮನೆಯಿಂದ ಹೊರಬಂದು ಈ ಅಪಪ್ರಚಾರದ ವಿರುದ್ಧ ಬೀದಿಗಿಳಿಯಬೇಕಾಗಿದೆ.ಹಿಂದುತ್ವ ಹಾಗೂ ಧಾರ್ಮಿಕ ಕ್ಷೇತ್ರಗಳ ಮೇಲೆ ದಾಳಿಯಾದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸುನಿಲ್ ಕುಮಾರ್ ಗುಡುಗಿದರು.
ಜನಜಾಗೃತಿ ವೇದಿಕೆಯ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಾತನಾಡಿ,ನೆಲ್ಯಾಡಿಬೀಡು ಹೊಯ್ಸಳರ ಕಾಲದಿಂದಲೂ ಗಟ್ಟಿಯಾಗಿ ನೆಲೆಯಾದ ಧರ್ಮಸ್ಥಳ ಕ್ಷೇತ್ರವನ್ನು ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲಾ ಪಕ್ಷ,ಮತ,ಧರ್ಮಗಳನ್ನು ಒಂದೇ ವೇದಿಕೆಯಲ್ಲಿ ತಂದ ಕೀರ್ತಿ ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲುತ್ತದೆ.ಮಾನವೀಯತೆ ಇದ್ದಾಗ ಮಾತ್ರ ಧರ್ಮರಕ್ಷಣೆ ಸಾಧ್ಯ. ಧರ್ಮಸ್ಥಳ ಕ್ಷೇತ್ರದ ವಿಚಾರದಲ್ಲಿ ರಾಜಕೀಯ ಬೇಡ .ಕ್ಷೇತ್ರದ ಹೆಸರನ್ನು ಕೆಡಿಸುವ ದುಷ್ಟ ಶಕ್ತಿಗಳ ಪ್ರಯತ್ನದ ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದರು.
ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಮಾತನಾಡಿ, ಇತಿಹಾಸವನ್ನು ತಿಳಿಯದಿದ್ದರೆ ಭವಿಷ್ಯವನ್ನು ಕಟ್ಟಲು ಸಾಧ್ಯವಿಲ್ಲ. ಮಹಿಳೆಯರಿಗೆ ಬದುಕು ಕೊಟ್ಟ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ನಾವು ಮರೆಯಬಾರದು.
ಧಾರ್ಮಿಕ ಕೇಂದ್ರಗಳ ಮೇಲೆ ದಾಳಿಯಾಗುತ್ತಿರುವಾಗ ಧರ್ಮ ಜಾಗೃತಿಗೆ ಮಹಿಳೆಯರು ಜಾಗೃತರಾಗಿ ಹೋರಾಟ ನಡೆಸಬೇಕಿದೆ ಎಂದರು.
ರವೀಶ್ ತಂತ್ರಿ ಕುಂಟಾರು ಮಾತನಾಡಿ, ಕೇಸರಿ ಶಾಲು ಹಾಕಿಕೊಂಡು ತಾನೂ ಕೂಡಾ ಹಿಂದೂ ಎಂದು ವಿದೇಶಿ ಧರ್ಮದ್ರೋಹಿಗಳ,ಅನ್ಯಮತೀರ ಜೊತೆ ಕೈಜೋಡಿಸಿ ಹಿಂದೂಗಳ ಧರ್ಮಕ್ಷೇತ್ರದ ವಿರುದ್ಧ ದಾಳಿ ಮಾಡುತ್ತಾನೆ ಎಂದಾದರೆ ಆತ ಹಿಂದೂ ಆಗಲಾರ.ಇಂತಹ ಶಕ್ತಿಗಳ ವಿರುದ್ಧ ಹೋರಾಟ ನಡೆಸುವ ಶಕ್ತಿ ಹಿಂದೂ ಸಮಾಜಕ್ಕಿದೆ ಎಂದು ಅವರು ಹೇಳಿದರು.
ಸಭಾ ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯ ಸಂಚಾಲಕ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಅವರು ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಮಂಡಿಸಿದರು.
ನಿರ್ಣಯ 1
ನಾಡಿನ ಪವಿತ್ರ ಶ್ರದ್ಧಾ ಕೇಂದ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ತೇಜೋವಧೆ ಮತ್ತು ನಿರಂತರ ಅಪಪ್ರಚಾರದ ವ್ಯವಸ್ಥಿತ ಷಡ್ಯಂತ್ರದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಶೇಷ ತನಿಖಾ ಸಂಸ್ಥೆಯನ್ನು (SIT) ರಚಿಸಿ ಪಾರದರ್ಶಕ ಮತ್ತು ನ್ಯಾಯಯುತ ತನಿಖೆಗೆ ಅನುಕೂಲ ಮಾಡಿಕೊಟ್ಟ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ಉಪ ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ ಹಾಗೂ (SIT) ತಂಡದ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸಲು ನಿರ್ಣಯಿಸಲಾಯಿತು.
ನಿರ್ಣಯ 2
ಹಿಂದೂ ಧಾರ್ಮಿಕ ಪುಣ್ಯಕ್ಷೇತ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ| ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಯುತ್ತಿರುವ ರಾಷ್ಟ್ರಮಟ್ಟದ ಈ ವ್ಯವಸ್ಥಿತ ಷಡ್ಯಂತ್ರವನ್ನು ಮತ್ತು ಸಾಮಾಜಿಕ ಜಾಲತಾಣಗಳ ಹಾಗೂ ದೃಶ್ಯ ಮಾಧ್ಯಮದ ಮೂಲಕ ನಡೆಯುತ್ತಿರುವ ಸುಳ್ಳು ಪ್ರಕರಣವನ್ನು ಕಠಿಣವಾಗಿ ಖಂಡಿಸಿ, ಇಂತಹ ಪ್ರಚಾರ ಮತ್ತು ಪ್ರಸಾರವನ್ನು ತಕ್ಷಣ ತಡೆಗಟ್ಟಿ ಇದನ್ನು ನಡೆಸುತ್ತಿರುವ ವ್ಯಕ್ತಿಗಳ, ಸಂಘ ಸಂಸ್ಥೆಗಳ ಹಾಗೂ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುತ್ತಿರುವ ವಾಹಿನಿಗಳ ವಿರುದ್ಧ ಸರ್ಕಾರ ಕಾನೂನಾತ್ಮಕ ನಿರ್ದಾಕ್ಷಿಣ್ಯ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಹಾಗೂ ಈ ತನಿಖೆಯನ್ನು SIT ನಡೆಸುತ್ತಿರುವುದು ತೃಪ್ತಿಕರವಾಗಿದ್ದು, ಈ ವಿಚಾರ ರಾಜ್ಯವನ್ನು ಮೀರಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೂ ವಿಸ್ತರಿಸಿರುವುದರಿಂದ ಹಾಗೂ ವಿದೇಶಿ ಹಣ, ಈ ದುಷ್ಕೃತ್ಯಕ್ಕೆ ಬಳಕೆಯಾದ ಬಗ್ಗೆ ಅನುಮಾನವಿರುವುದರಿಂದ ಇದನ್ನು ವಿಶೇಷ ತನಿಖೆಗಾಗಿ NIA ಗೆ ನೀಡಬೇಕೆಂದು ಆಗ್ರಹಿಸುತ್ತಿದ್ದೇವೆ.
ನಿರ್ಣಯ 3
ಮುಂದಿನ ದಿನಗಳಲ್ಲಿ ನಮ್ಮ ಯಾವುದೇ ಶ್ರದ್ಧಾ ಕೇಂದ್ರಗಳ ವಿರುದ್ಧ ಧಾರ್ಮಿಕ ನಂಬಿಕೆಗಳ ವಿರುದ್ಧ ಮತ್ತು ಧಾರ್ಮಿಕ ಮುಖಂಡರ ವಿರುದ್ದ ಇಂತಹ ವ್ಯವಸ್ಥಿತ ಷಡ್ಯಂತ್ರಗಳು ನಡೆದರೆ ಸಮಾಜದ ಧಾರ್ಮಿಕ ಮುಖಂಡರ ಮುಂದಾಳತ್ವದಲ್ಲಿ ಸಂಘಟಿತರಾಗಿ ಸಮರ್ಥ ಯೋಜನೆಯನ್ನು ರೂಪಿಸಿ ಅದರ ವಿರುದ್ಧ ಹೋರಾಡಲಾಗುವುದು ಎಂದು ನಿರ್ಣಯಿಸಲಾಯಿತು.
ನಿರ್ಣಯ 4
ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಪ್ರಸ್ತುತ ನಡೆಯುತ್ತಿರುವ ಷಡ್ಯಂತ್ರಗಳ ಹಿಂದೆ ವ್ಯವಸ್ಥಿತ ಪಿತೂರಿ ಇರುವುದು ಬಯಲಾಗಿದ್ದು, ರಾಷ್ಟ್ರಮಟ್ಟದಲ್ಲಿ ಇಂತಹ ಸಂಚುಗಳು ನಡೆಯುತ್ತಿರುವುದರಿಂದ ಸಂಘಟನಾ ದೃಷ್ಠಿಯಿಂದ ಧರ್ಮಸಂರಕ್ಷಣಾ ಸಮಿತಿಯನ್ನು ಇನ್ನಷ್ಟು ಬಲಪಡಿಸಿ ವರ್ಷಕ್ಕೆ ಒಂದು ಬಾರಿ ಧರ್ಮಸಂರಕ್ಷಣಾ ಸಮಾವೇಶವನ್ನು ಆಯೋಜಿಸುವುದಕ್ಕೆ ಸೂಕ್ತ ಕಾರ್ಯಯೋಜನೆಗಳನ್ನು ರೂಪಿಸಲು ನಿರ್ಣಯಿಸಲಾಯಿತು.
ನಿರ್ಣಯ 5
ಇಂದು ಅಪಪ್ರಚಾರದ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳನ್ನು ದಮನಿಸಲು ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸಲು ರಾಕ್ಷಸೀಪ್ರವೃತ್ತಿಯವರು ಸಂಚು ಮಾಡಿದ್ದಾರೆ/ಮಾಡುತ್ತಿದ್ದಾರೆ. ಇಂತಹ ಕಠಿಣ ಸಮಯದಲ್ಲಿ ನಾವೆಲ್ಲರೂ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳಾದ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರೊಂದಿಗೆ ದೃಢವಾಗಿ ನಿಂತು ಧರ್ಮ ಸಂರಕ್ಷಣೆಯನ್ನು ಮಾಡಲು ಕಟಿಬದ್ದರಾಗಿರುತ್ತೇವೆ ಎಂದು ತ್ರಿಕರಣಪೂರ್ವಕವಾಗಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಧಾಕರ ಶೆಟ್ಟಿ, ಸಾಣೂರು ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ನ್ಯಾಯವಾದಿ ಎಂ.ಕೆ ವಿಜಯ ಕುಮಾರ್, ಉದ್ಯಮಿ ಬೋಳ ಪ್ರಭಾಕರ್ ಕಾಮತ್, ಭಾಸ್ಕರ್ ಕೋಟ್ಯಾನ್,ಶ್ರೀರಾಮ್ ಭಟ್ ಸಾಣೂರು, ಮಹೇಶ್ ಶೆಣೈ ಬೈಲೂರು ಮುಂತಾದವರು ಉಪಸ್ಥಿತರಿದ್ದರು.
ಉದಯ ಕುಮಾರ್ ಎರ್ಲಪಾಡಿ ಸ್ಬಾಗತಿಸಿ, ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.