
ಕಾರ್ಕಳ: ಕಾರ್ಕಳದ ಕ್ರೈಸ್ಟ್ ಕಿಂಗ್ ಕಾಲೇಜು ಆಡಳಿತ ಮಂಡಳಿಯು ತನ್ನ ಆವರಣವನ್ನು ವಿಸ್ತರಿಸಿ ರಸ್ತೆ ನಿರ್ಮಿಸಲು ಸರ್ಕಾರಿ ಮರಗಳ್ನು ಕಡಿದು ಅರಣ್ಯ ಇಲಾಖೆಗೆ ಲಕ್ಷಾಂತರ ರೂ ನಷ್ಟ ಉಂಟು ಮಾಡಿದೆ ಎನ್ನುವ ಆರೋಪ ಕೇಳಿಬಂದಿದ್ದು, ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತು ಕ್ರಮಕೈಗೊಳ್ಳುವಂತೆ ಕಾರ್ಕಳ ಪುರಸಭೆಗೆ ದೂರು ನೀಡಿದ್ದಾರೆ.
ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಸರ್ಕಾರಿ ಜಾಗದ ಮರಗಳನ್ನು ಅಪಾಯಕಾರಿ ಮರಗಳು ಎಂದು ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿ ಬೆಲೆಬಾಳುವ ಮರಗಳನ್ನು ಕಡಿದು ಹಾಕಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಕ್ರಮವಾಗಿ ರಸ್ತೆ ನಿರ್ಮಿಸಲು ಸರ್ಕಾರಿ ಮರಗಳಿಗೆ ಕೊಡಲಿಯೇಟು ಹಾಕಿರುವ ಆಡಳಿತ ಮಂಡಳಿಯ ವಿರುದ್ಧ ಪರಿಸರ ಪ್ರೇಮಿಗಳು ತೀವೃ ಆಕ್ರೋಶ ಹೊರಹಾಕಿದ್ದು, ಕ್ರಮಕೈಗೊಳ್ಳದ ಅರಣ್ಯ ಇಲಾಖೆಯ ವಿರುದ್ಧ ಕಿಡಿಕಾರಿದ್ದಾರೆ. ಇದಲ್ಲದೇ ಕಾಲೇಜು ಆವರಣಕ್ಕೆ ಹೊಂದಿಕೊAಡು ಮಕ್ಕಳಿಗಾಗಿ ನಿರ್ಮಿಸಲಾದ ಪಾರ್ಕನ್ನು ಕೆಡವಿ ಶೌಚಾಲಯ ನಿರ್ಮಾಣ ಮಾಡಿ ಜಾಗವನ್ನು ಒತ್ತುವರಿ ಮಾಡಿದ ಆರೋಪವಿದ್ದು, ಈ ಪಾರ್ಕಿಗೆ ಬದಲಾಗಿ ಬೇರೆ ಪಾರ್ಕ್ ನಿರ್ಮಿಸುವುದಾಗಿ ಪುರಸಭೆಗೆ ಭರವಸೆ ನೀಡಿತ್ತು. ಆದರೆ ಬಳಿಕ ಮಕ್ಕಳ ಆಟದ ಪಾರ್ಕ್ ನಿರ್ಮಿಸದೇ ನಿಯಮ ಉಲ್ಲಂಘಿಸಿದೆ ಎನ್ನುವ ಆರೋಪವೂ ಕೇಳಿಬಂದಿದೆ.
ಮರಗಳನ್ನು ಕಡಿದು ಹಾಕಿದ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಅಪಾಯಕಾರಿ ಮರಗಳ ತೆರವಿಗೆ ಅರ್ಜಿ ಬಂದ ಹಿನ್ನಲೆಯಲ್ಲಿ ಮರಗಳನ್ನು ತೆರವು ಮಾಡಲಾಗಿದೆ ಎನ್ನುವ ರೆಡಿಮೇಡ್ ಉತ್ತರ ಕೊಟ್ಟಿದ್ದಾರೆ. ಆದರೆ ಅಪಾಯಕಾರಿ ಮರಗಳ ತೆರವಿಗೆ ಒಂದಷ್ಟು ನಿಯಮಾವಳಿಗಳಿದ್ದು, ಸರ್ಕಾರಿ ಅಥವಾ ಅರಣ್ಯ ಜಮೀನನ್ನು ಕಬಳಿಸಿ ಕಟ್ಟಡ ನಿರ್ಮಿಸಿ ಬಳಿಕ ಅಪಾಯಕಾರಿ ಮರಗಳ ತೆರವಿಗೆ ಅರ್ಜಿ ಸಲ್ಲಿಸಿದರೆ ಇಂತಹ ಅರ್ಜಿಗಳನ್ನು ಪರಗಣಿಸಲು ಅವಕಾಶವಿಲ್ಲ. ನಿಯಮ ಮೀರಿ ಅರಣ್ಯ ಇಲಾಖೆಯ ಅಧಿಕಾರಿಗಳು ಜಾಗದ ಸರ್ವೇ ಮಾಡದೇ ಏಕಾಎಕಿ ಮರ ಕಡಿಯಲು ಹೇಗೆ ಅನುಮತಿ ನೀಡಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪುರಸಭೆಯು ಕ್ರೈಸ್ಟ್ ಕಿಂಗ್ ಕಾಲೇಜು ಆಡಳಿತ ತಕ್ಷಣವೇ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕಿದೆ.

.
.
