
ಕಾರ್ಕಳ,ಜ.22:ಕಾರ್ಕಳದಲ್ಲಿ ಕಲ್ಲು ಗಣಿಗಾರಿಕೆ ದಂಧೆ ಮಿತಿಮೀರಿದ್ದು ,ಗಣಿ ಮಾಲೀಕರ ನಿಯಮಬಾಹಿರ ಚಟುವಟಿಕೆಗಳ ವಿರುದ್ಧ ಹೋರಾಟ ನಡೆಸುವವರಿಗೆ ಬೆದರಿಕೆ ಹಾಕುವ ಪ್ರಕರಣಗಳು ನಡೆಯುತ್ತಿವೆ.
ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಎಂಬಲ್ಲಿ ನಿಯಮಾವಳಿ ಉಲ್ಲಂಘಿಸಿ ಸ್ಪೋಟಕ ಬಳಸಿ ನಡೆಸುತ್ತಿದ್ದ ಕಲ್ಲು ಗಣಿಗಾರಿಕೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಪರಿಶಿಷ್ಟ ಪಂಗಡ ಮಹಿಳೆಗೆ ಅವಾಚ್ಯ ಪದಗಳಿಂದ ನಿಂದಿಸಿ ಕೊಲೆ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.
ಕುಕ್ಕುಂದೂರು ಗ್ರಾಮದ ನಕ್ರೆಯ ಹಾಂಕ್ರಾಡಿ ನಿವಾಸಿ ಲಲಿತಾ ನಾಯ್ಕ ಎಂಬವರ ಕೃಷಿಭೂಮಿಯ ಪಕ್ಕದಲ್ಲಿ ಜನವಸತಿ ಪ್ರದೇಶದಲ್ಲಿನ ಪಟ್ಟಾ ಜಾಗದಲ್ಲಿ ಸ್ಪೋಟಕ ಬಳಸಿ ರವಿಚಂದ್ರ ಹಾಗೂ ಪವನ್ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು. ಇದರಿಂದ ಲಲಿತಾ ನಾಯ್ಕ್ ಅವರ ಕೃಷಿಭೂಮಿಗೆ ಗಣಿಗಾರಿಕೆಯ ಕಲ್ಲು ಸಿಡಿದು ಧೂಳು ಆವರಿಸಿ ತೊಂದರೆಯಾಗುತ್ತಿದೆ ಎಂದು ಗಣಿಗಾರಿಕೆಗೆ ಆಕ್ಷೇಪಿಸಿದ್ದರು. ಹಾಗೂ ಸೂಕ್ತ ಕ್ರಮಕೈಗೊಳ್ಳುವಂತೆ ಸ್ಥಳೀಯ ಪಂಚಾಯತ್ ಆಡಳಿತಕ್ಕೆ ದೂರು ನೀಡಿದ್ದರು. ತಮ್ಮ ವಿರುದ್ಧ ದೂರು ನೀಡಿದ ಲಲಿತಾ ,ಅಣ್ಣಿ ನಾಯ್ಕ್ ಹಾಗೂ ಸುಜಾತ ಎಂಬವರಿಗೆ ಅವಾಚ್ಯ ಪದಗಳಿಂದ ಬೈದು ಹಲ್ಲೆಗೆ ಯತ್ನಿಸಿ ನಮ್ಮ ತಂಟೆಗೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ರವಿಚಂದ್ರ ಹಾಗೂ ಪವನ್ ಎಂಬವರ ವಿರುದ್ಧ ದಲಿತ ದೌರ್ಜನ್ಯ ಸೆಕ್ಷನ್ ಅಡಿ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾನೂನುಬಾಹಿರ ಗಣಿ ಲೂಟಿ ಮಾಡುತ್ತಿರುವ ದಂಗೆಕೋರರ ವಿರುದ್ಧ ಗಣಿ ಅಧಿಕಾರಿಗಳು ಕಠಿಣ ಕ್ರಮ ಜರುಗಿಸಿ ಸರ್ಕಾರದ ಗಣಿಸಂಪತ್ತು ರಕ್ಷಿಸಬೇಕಿದೆ.

.
.
.
.
