ಬೆಂಗಳೂರು: ಬಹುತೇಕ ಗ್ಯಾರಂಟಿ ಯೋಜನೆಗಳಿಂದಲೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೇ ಹುಮ್ಮಸ್ಸಿನಲ್ಲಿ ದೇಶದಾದ್ಯಂತ 25 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು.ಇದರಲ್ಲಿ ಮಹಿಳೆಯರ ಖಾತೆಗೆ ವಾರ್ಷಿಕ ತಲಾ 1 ಲಕ್ಷ ಹಣ ಪಾವತಿಸುವ ಗ್ಯಾರಂಟಿ ಪ್ರಮುಖವಾಗಿದೆ. ಇದೀಗ ಇದೇ ಗ್ಯಾರಂಟಿಯು ಚುನಾವಣೆ ಮುಗಿಯುವ ಮುನ್ನವೇ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜುಲೈ ತಿಂಗಳಿನಿಂದಲೇ ಪ್ರತೀ ತಿಂಗಳು8400 ರೂ ಹಣ ಟಕಾ ಟಕ್ ಟಕಾ ಟಕ್ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಳಿದ್ದರು.
ರಾಹುಲ್ ಗಾಂಧಿಯವರ ಈ ಘೋಷಣೆಯ ಬೆನ್ನಲ್ಲೇ ಇದನ್ನೇ ಗಂಭೀರವಾಗಿ ಪರಿಗಣಿಸಿರುವ ಮಹಿಳೆಯರು ಖಾತೆ ತೆರೆಯಲು ಪೋಸ್ಟ್ ಆಫೀಸ್ನಲ್ಲಿ ಕ್ಯೂ ನಿಂತಿದ್ದಾರೆ. ಬೆಳಗಿನ ಜಾವ 4 ಗಂಟೆಗೆ ಹೋಗಿ ಪೋಸ್ಟ್ ಆಫೀಸ್ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಈಗಲೇ ಖಾತೆ ಮಾಡಿಸಿಕೊಂಡರೆ ತಿಂಗಳಿಗೆ ನಮ್ಮ ಖಾತೆ 8500 ರೂ. ಜಮಾ ಮಾಡುತ್ತಾರೆ ಎಂಬ ಆಸೆಯಿಂದಲೇ ಊಟ, ತಿಂಡಿ ಬಿಟ್ಟು ಕ್ಯೂನಲ್ಲಿ ನಿಂತು ಡಿಜಿಟಲ್ ಖಾತೆ ಓಪನ್ ಮಾಡಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರಿನ ಪೋಸ್ಟ್ ಆಫೀಸ್ಗಳಲ್ಲಿ ಮಹಿಳೆಯರು ತುಂಬಿ ತುಳುಕುತ್ತಿದ್ದಾರೆ. IPPB ಖಾತೆ ತೆರೆಯಲು ಗಂಟೆಗಟ್ಟಲೇ ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಕಳೆದ 15 ದಿನಗಳಿಂದ ನಗರದಲ್ಲಿ ಇದೇ ಸ್ಥಿತಿ ಇದೆ ಎಂದು ಹೇಳಲಾಗಿದೆ. ಇನ್ನು ಸಾಕಷ್ಟು ಮಹಿಳೆಯರು ಬರುತ್ತಿರುವ ಕಾರಣ, ಜನಜಂಗುಳಿಯನ್ನು ನಿಯಂತ್ರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪೋಸ್ಟ್ ಆಫೀಸ್ಗಳಲ್ಲಿ ಟೋಕನ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ, ಟೋಕನ್ಗಳು ಸಹ ಖಾಲಿಯಾದ ಹಿನ್ನೆಲೆಯಲ್ಲಿ ಇದೀಗ ಕೌಂಟರ್ಗಳನ್ನು ತೆರೆದು, ಬರುವಂತಹ ಮಹಿಳೆಯರ ಆಧಾರ್ ಕಾರ್ಡ್ ಪರಿಶೀಲನೆ ಮಾಡಿ ರಿಜಿಸ್ಟ್ರೇಷನ್ ಮಾಡಲಾಗುತ್ತಿದೆ.
ಇನ್ನು ಮಹಿಳೆಯರ ಸಂಖ್ಯೆಯನ್ನು ದಂಗಾದ ಪೋಸ್ಟ್ ಆಫೀಸ್ ಕಚೇರಿ ಸಿಬ್ಬಂದಿ ನಿಮ್ಮ ಖಾತೆಗೆ ಈಗಲೇ ಹಣ ಬರುವುದಿಲ್ಲ ಎಂಬ ಬೋರ್ಡ್ ಹಾಕಿದ್ದಾರೆ. ನೀವು ಬಂದು IPPB ಖಾತೆಯನ್ನು ತೆರೆಯಬಹುದು ಆದರೆ, ನಮ್ಮಿಂದ ಯಾವುದೇ ಹಣ ನಿಮ್ಮ ಖಾತೆಗೆ ಬರುವುದಿಲ್ಲ. ಮುಂದೆ ಇಂಡಿ ಒಕ್ಕೂಟ ಅಧಿಕಾರಕ್ಕೆ ಬಂದು ಹಣ ಜಮೆ ಮಾಡುವ ಯೋಜನೆ ಜಾರಿ ಮಾಡಿದರೆ ಮಾತ್ರ ನಿಮ್ಮ ಖಾತೆಗೆ ಹಣ ಬರಲಿದೆ ಎಂದು ಬೋರ್ಡ್ ಅಳವಡಿಸುವ ಮೂಲಕ ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾರೆ.
ಒಟ್ಟಿನಲ್ಲಿ ಜನರಿಗೆ ಉಚಿತವಾಗಿ ಸಿಗುತ್ತದೆ ಎಂದಾದರೆ ತಮ್ಮ ಕೆಲಸ ವನ್ನು ಬಿಟ್ಟಿ ಆಸೆಗೆ ಬಾಯಿ ಬಿಡುತ್ತಾರೆ ಎನ್ನುವುದು ವಿಪರ್ಯಾಸ