ಕರಾವಳಿನ್ಯೂಸ್ ಡೆಸ್ಕ್
ದೇಶದ ಅಭಿವೃದ್ಧಿ ವಿಚಾರದಲ್ಲಿ ಕರಾವಳಿಯ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪಾಲು ಕೂಡ ಅತೀ ಮಹತ್ವದ್ದಾಗಿದೆ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಹಾಗೂ ಟೆಂಪಲ್ ಟೂರಿಸಂ ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶಗಳಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರಾಸಕ್ತಿಯಿಂದ ಕರಾವಳಿಯ ಉಭಯ ಜಿಲ್ಲೆಗಳು ನಿರೀಕ್ಷಿತ ಅಭಿವೃದ್ಧಿ ಸಾಧಿಸಿಲ್ಲ. ಪ್ರಮುಖವಾಗಿ ದೇಶದ ನಾನಾ ಭಾಗಗಳಿಂದ ಭಕ್ತರು ಹಾಗೂ ಪ್ರವಾಸಿಗರು ಉಡುಪಿ, ದಕ್ಷಿಣ ಕನ್ನಡ ಜಲ್ಲೆಗಳಿಗೆ ಬರುತ್ತಾರೆ. ಆದರೆ ಅವರಿಗೆ ಇಲ್ಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಓಡಾಡಲು ಸೂಕ್ತ ಸಾರಿಗೆ ಸಂಪರ್ಕದ ವ್ಯವಸ್ಥೆ ಇಲ್ಲದ ಹಿನ್ನಲೆಯಲ್ಲಿ ಕರಾವಳಿ ಜಿಲ್ಲೆಗಳು ಆರ್ಥಿಕವಾಗಿ ಪ್ರಗತಿ ಕಂಡಿಲ್ಲ
ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಮಂಜುನಾಥ, ಮಂಗಳೂರಿನ ಗೋಕರ್ಣನಾಥೇಶ್ವರ, ಕಟೀಲು ದುರ್ಗಾಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿ, ಮೂಲ್ಕಿ ಬಪ್ಪನಾಡು ಅನ್ನಪೂರ್ಣೇಶ್ವರಿ, ಉಡುಪಿ ಕೃಷ್ಣ ಮಠ, ಕೊಲ್ಲೂರು ಮೂಕಾಂಬಿಕೆ, ಮಂದರ್ತಿ ದುರ್ಗಾಪರಮೇಶ್ವರಿ ಸೇರಿದಂತೆ ಸಾಕಷ್ಟು ಧಾರ್ಮಿಕ ಶ್ರದ್ಧಾಕೇಂದ್ರಗಳಿಗೆ ದೇಶದೆಲ್ಲೆಡೆಯಿಂದ ಭಕ್ತರು ಆಗಮಿಸುತ್ತಾರೆ.
ಇದಲ್ಲದೇ ಕಾರ್ಕಳದ ಸಂತ ಲಾರೆನ್ಸ್ ಬಸಿಲಿಕಾ, ಪಡುತಿರುಪತಿ ಖ್ಯಾತಿಯ ವೆಂಕಟರಮಣ ದೇವಸ್ಥಾನಗಳಿಗೂ ದೂರದ ಊರುಗಳಿಂದ ಅಸಂಖ್ಯಾತ ಭಕ್ತರು ಬರುತ್ತಿದ್ದಾರೆ. ಆದರೆ ಬಹುತೇಕ ಪ್ರವಾಸಿಗರು ಹಾಗೂ ಭಕ್ತರು ಸೂಕ್ತ ಸಂಪರ್ಕ ವ್ಯವಸ್ಥೆಯಿಲ್ಲದ ಕಾರಣದಿಂದ ವರ್ಷಕ್ಕೆ ಒಂದು ಸಲ ಭೇಟಿ ನೀಡುವುದರಿಂದ ಪ್ರವಾಸೋದ್ಯಮಕ್ಕೂ ಭಾರೀ ಹಿನ್ನಡೆಯಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟನಲ್ಲಿ ಸಾರಿಗೆ ವ್ಯವಸ್ಥೆಯ ಜತೆ ರೈಲ್ವೇ ಸಾರಿಗೆ ಸಂಪರ್ಕ ಕೂಡ ಅತೀಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕರಾವಳಿ ಜಿಲ್ಲೆಗಳ ಎಲ್ಲಾ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು, ಸಚಿವರು ಪಕ್ಷಬೇಧ ಮರೆತು ಕೇಂದ್ರದ ಮೇಲೆ ಒತ್ತಡ ಹಾಕಿ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ದೇವಸ್ಥಾನಗಳು ಹಾಗೂ ಧಾರ್ಮಿಕ ಶ್ರದ್ದಾಕೇಂದ್ರಗಳನ್ನು ಸಂಪರ್ಕಿಸುವ ಹೊಸ ರೈಲು ಮಾರ್ಗಗಳನ್ನು ಮಂಜೂರುಗೊಳಿಸಬೇಕಿದೆ. ಇದರಿಂದ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳು ಆರ್ಥಿಕವಾಗಿಯೂ ಸಾಕಷ್ಟು ಅಭಿವೃದ್ಧಿ ಹೊಂದಲಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೂ ಕೂಡ ಕರಾವಳಿ ಜಿಲ್ಲೆಗಳ ಮೇಲೆ ಕೃಪೆ ತೋರಲಿ ಎನ್ನುವುದೇ ಕರಾವಳಿ ನ್ಯೂಸ್ ಆಶಯ
