ವರದಿ: ಕರಾವಳಿನ್ಯೂಸ್ ಹೆಲ್ತ್ ಡೆಸ್ಕ್
ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಮಳೆಗಾಲ ಬಂತೆAದರೆ ಸಾಕು ಕ್ಲಿನಿಕ್ ಗಳು ಜನರಿಂದ ತುಂಬಿಹೋಗುತ್ತವೆ. ಬೇಸಗೆ ಮುಗಿದು ಒಂದೆರಡು ಮಳೆಯಾಗುತ್ತಿದ್ದಂತೆಯೇ ಅಲ್ಲಲ್ಲಿ ಸಾಂಕ್ರಾಮಿಕ ಕಾಯಿಲೆಗಳಾದ ಡೆಂಘಿ, ಮಲೇರಿಯಾದ ಅಬ್ಬರ ಕೂಡ ಜೋರಾಗುವ ಸಾಧ್ಯತೆಯಿದೆ. ಆದ್ದರಿಂದ ನಿಮ್ಮ ಮಕ್ಕಳ ಆರೋಗ್ಯದ ಕುರಿತು ಇರಲಿ ಕಾಳಜಿ. ಬೇಸಗೆಯಲ್ಲಿ ನೀರು ಕಲುಷಿತವಾಗುವ ಹಿನ್ನಲೆಯಲ್ಲಿ ಮಕ್ಕಳಿಗೆ ಸಾಧ್ಯವಾದಷ್ಟು ಬಿಸಿ ನೀರನ್ನೇ ಕೊಡಬೇಕು.ಆರೋಗ್ಯದ ದೃಷ್ಟಿಯಿಂದ ಬಿಸಿ ನೀರು ಕುಡಿಯುವುದು ತುಂಬಾ ಉತ್ತಮ, ಪ್ರತಿನಿತ್ಯ ಬಿಸಿನೀರು ಕುಡಿದರೆ ಸಾಮಾನ್ಯವಾಗಿ ಜ್ವರ, ಶೀತ, ನೆಗಡಿಯಂತಹ ಕಾಯಿಲೆಗಳಿಂದ ದೂರವಿರಬಹುದು. ಆದರೆ ಬಿಸಿನೀರು ಕುಡಿಯುವ ಅಭ್ಯಾಸವಿಲ್ಲದವರು ಬೇಸಗೆಯಲ್ಲಿ ಸಾಧ್ಯವಾದಷ್ಟು ಕುದಿಸಿ ಆರಿಸಿದ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ, ಬೇಸಗೆಯಲ್ಲಿ ಬಾವಿಗಳಲ್ಲಿ ನೀರು ತಳಸೇರಿ ಕಲುಷಿತವಾಗುತ್ತದೆ, ಆದ್ದರಿಂದ ಬೇಸಗೆ ಹಾಗೂ ಮಳೆಗಾಲದ ಆರಂಭದಲ್ಲಿ ಸಾಧ್ಯವಾದಷ್ಟು ಬಿಸಿ ನೀರು ಕುಡಿದರೆ ಸಾಂಕ್ರಾಮಿಕ ರೋಗದ ಸಮಸ್ಯೆ ಅಷ್ಟೇನೂ ಕಾಡುವುದಿಲ್ಲ.
ಇದಲ್ಲದೇ ಮನೆಯ ಸುತ್ತಮುತ್ತ ಕೊಳಚೆ ನೀರು ಶೇಖರಣೆಯಾಗದಂತೆ ಎಚ್ಚರವಹಿಸಬೇಕು, ಕೊಳವೆ ನೀರಿನಿಂದಾಗಿ ಮುಂಗಾರು ಪೂರ್ವ ಮಳೆಗೆ ಸಾಕ್ರಾಮಿಕ ಕಾಯಿಲೆಗಳು ಬಹುಬೇಗ ಹರಡುತ್ತವೆ. ಮನೆಯ ಸುತ್ತಮುತ್ತಲಿನ ಹೊಂಡ ಅಥವಾ ಕೊಳ್ಳದಲ್ಲಿ ನಿಂತಿರುವ ನೀರು ಸೊಳ್ಳೆಗಳಿಗೆ ವರದಾನವಾಗುತ್ತದೆ. ಕೊಳಚೆ ಮಿಶ್ರಿತ ಮಳೆನೀರು ಅಲ್ಲಲ್ಲಿ ಶೇಖರಣೆಯಾದ ಪರಿಣಾಮವಾಗಿ ಸೊಳ್ಳೆಗಳು ಈ ನೀರಿನಲ್ಲಿ ಮೊಟ್ಟೆಯಿಟ್ಟು ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಆದ್ದರಿಂದ ಮಳೆಗಾಲದ ಆರಂಭಕ್ಕೂ ಮುನ್ನ ಮನೆಯ ಸುತ್ತಮುತ್ತಲಿನ ಪರಿಸರದಲ್ಲಿನ ಗುಂಡಿಗಳು, ತೆಂಗಿನ ಚಿಪ್ಪು, ವಾಹನಗಳ ಟಯರ್‌ಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಮಾತ್ರವಲ್ಲದೇ ಕಸಕಡ್ಡಿಗಳನ್ನು ತೆಗೆದು ಸ್ವಚ್ಚತೆ ಕಾಪಾಡಿಕೊಂಡಲ್ಲಿ ಸೊಳ್ಳೆಗಳಿಂದ ಹರಡುವ ಕಾಯಿಲೆಗಳಿಗೆ ಬ್ರೇಕ್ ಹಾಕಬಹುದಾಗಿದೆ. ವಿಪರೀತ ಸೊಳ್ಳೆಕಾಟವಿದ್ದಲ್ಲಿ ಫಾಗಿಂಗ್ ಮೂಲಕ ಸೊಳ್ಳೆಗಳನ್ನು ನಾಶಪಡಿಸಬಹುದಾಗಿದೆ. ಪ್ರತಿಯೊಬ್ಬರೂ ಸ್ವಚ್ಚತೆಯ ಬಗ್ಗೆ ಕಾಳಜಿ ವಹಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಜತೆ ಕೈಜೋಡಿಸಿದರೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.