ಶಿವಮೊಗ್ಗ: ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ NIA ಅಧಿಕಾರಿಗಳು ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ನನ್ನು ವಶಕ್ಕೆ ಪಡೆದಿರುವ ಎನ್ ಐಎ ಅಧಿಕಾರಿಗಳು ವಿಚಾರಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಆದರೆ ಸಾಯಿಪ್ರಸಾದ್ ಈ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ
ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಕಳೆದ ವಾರ ತೀರ್ಥಹಳ್ಳಿಯಲ್ಲಿ ದಾಳಿ ನಡೆಸಿದ್ದ ಎನ್ ಐಎ ಅಧಿಕಾರಿಗಳು ಇಬ್ಬರು ಮುಸ್ಲಿಂ ಯುವಕರ ಮನೆಗಳು ಹಾಗು ಮೊಬೈಲ್ ಅಂಗಡಿ ಶೋಧ ನಡೆಸಿದ್ದರು. ಇದೀಗ ಮುಸ್ಲಿಂ ಯುವಕರ ಜೊತೆ ಸಂಪರ್ಕದಲ್ಲಿದ್ದ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ನನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆಂದು ತಿಳಿದುಬಂದಿದೆ. ಕೆಫೆ ಬಾಂಬ್ ಸಂಚುಕೋರನಿಗೆ ಬಾಡಿಗೆ ಮನೆ ಕೊಡಿಸಿದ್ದು ಚಿಕ್ಕಮಗಳೂರು ಸಿಪಿಐ ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಸಂಚುಕೋರನ ತಾಯಿಗೆ ಚಿಕ್ಕಮಗಳೂರಿನಲ್ಲಿ ಬಾಡಿಗೆ ಮನೆ ಕೊಡಿಸಲು ಸಹಾಯ ಮಾಡಿದ್ದು ಪೊಲೀಸ್ ಇನ್ಸ್ಪೆಕ್ಟರ್ ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ಬಾಂಬ್ ಸ್ಫೋಟದ ಪ್ರಮುಖ ಸಂಚುಕೋರ ಮುಜಾಮಿಲ್ ಶರೀಫ್ ಮೂಲತಃ ಕಳಸದವನಾಗಿದ್ದು, ಮುಜಾಮಿಲ್ ತನ್ನ ತಾಯಿಯನ್ನು ಚಿಕ್ಕಮಗಳೂರಿಗೆ ಕರೆತಂದು ಬಾಡಿಗೆ ಮನೆಯಲ್ಲಿರಿಸಲು ಸಹಾಯ ಮಾಡಿದ್ದು ಪೊಲೀಸ್ ಇನ್ಸ್ಪೆಕ್ಟರ್ ಎಂದು ಹೇಳಲಾಗುತ್ತಿದೆ. ಮುಜಾಮಿಲ್ಗೆ ಇನ್ಸ್ಪೆಕ್ಟರ್ ಬಾಡಿಗೆ ಮನೆ ಹುಡುಕಿಕೊಟ್ಟಿದ್ದರು. ಆ ಮನೆಯಲ್ಲಿ ಮುಜಾಮಿಲ್ ತಾಯಿ ವಾಸವಾಗಿದ್ದರು. ಹೀಗಾಗಿ ಮುಜಾಮಿಲ್ಗೂ ಪೊಲೀಸ್ ಇನ್ಸ್ಪೆಕ್ಟರ್ ಗೂ ನಂಟು ಇತ್ತೇ ಎಂಬ ಸಂಶಯದ ಮೇರೆಗೆ ಇದೀಗ ಇನ್ಸ್ಪೆಕ್ಟರ್ ಗೆ ಎನ್ಐಎ ನೋಟೀಸ್ ಜಾರಿ ಮಾಡಿದೆ ಎಂದು ಹೇಳಲಾಗುತ್ತಿದೆ.
ತಮಿಳುನಾಡಿನಲ್ಲಿ ಕಚ್ಚಾ ಬಾಂಬ್ ತಯಾರಿಸಿದ ಶಂಕೆ!
ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಮುನ್ನ ತಮಿಳುನಾಡಿನ ಕೃಷ್ಣಗಿರಿ ಅರಣ್ಯ ಪ್ರದೇಶದಲ್ಲಿ ಸುಧಾರಿತ ಕಚ್ಚಾ ಬಾಂಬ್ (ಐಇಡಿ) ಅನ್ನು ಶಂಕಿತ ಐಸಿಸ್ ಉಗ್ರರು ತಯಾರಿಸಿರಬಹುದು ಎಂದು ರಾಷ್ಟ್ರೀಯ ತನಿಖಾ ದಳ (NIA) ಶಂಕೆ ವ್ಯಕ್ತಪಡಿಸಿದೆ. ನಾಲ್ಕು ವರ್ಷಗಳಿಂದ ಎನ್ಐಎ ಕೈ ಸಿಗದೆ ತಲೆಮರೆಸಿಕೊಂಡಿರುವ ಶಂಕಿತ ಉಗ್ರ ಮುಸಾವೀರ್ ಹುಸೇನ್ ಶಾಜಿಬ್ ಹಾಗೂ ಅಬ್ದುಲ್ ಮತೀನ್ ತಾಹಾ, ಕೆಫೆ ಸ್ಫೋಟಕಕ್ಕೂ ಮುನ್ನ ತಮಿಳುನಾಡಿನಲ್ಲಿ ಆಶ್ರಯ ಪಡೆದಿದ್ದರು. ಹಾಗಾಗಿ ಈ ವಿಧ್ವಂಸಕ ಕೃತ್ಯಕ್ಕೆ ಬಳಸಲಾದ ಕಚ್ಚಾ ಬಾಂಬ್ ಅನ್ನು ತಮಿಳುನಾಡಿನ ಕೃಷ್ಣಗಿರಿ ಬಳಿ ತಯಾರಿಸಿರಬಹುದು ಎಂದು ಎನ್ಐಎ ಅಧಿಕಾರಿಗಳು ಶಂಕಿಸಿದ್ದಾರೆ.




