ಕಾರ್ಕಳ:ಅಂಗಡಿಯೊಂದರಲ್ಲಿ ದಿನಸಿ ಸಾಮಾಗ್ರಿಗಳನ್ನು ಖರೀದಿಸಿ ರಸ್ತೆ ಬದಿಯಲ್ಲಿ ತನ್ನ ಸ್ನೇಹಿತನ ಜತೆ ನಡೆದುಕೊಂಡು ಹೋಗುತ್ತಿದ್ದ ಜಾರ್ಖಂಡ್ ಮೂಲದ ವ್ಯಕ್ತಿಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಬಿನೇಶ್ವರ ನಾಗೇಶಿಯ ಎಂಬಾತ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.
ಜಾರ್ಖಂಡ್ ರಾಜ್ಯದ ಲತೇಹಾರ್ ಜಿಲ್ಲೆಯ ವಿನಯ್ ನಾಗೇಶಿಯ ತನ್ನ ಸ್ನೇಹಿತ ಬಿನೇಶ್ವರ ನಾಗೇಶಿಯ ಜತೆ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಶನಿವಾರ ಕೆಲಸ ಮುಗಿಸಿ ಮನೆಗೆ ಬೇಕಾದ ದಿನಸಿ ಸಾಮಾಗ್ರಿಗಳನ್ನು ಖರೀದಿಸಿ ಬಳಿಕ ಇಬ್ಬರು ರಾತ್ರಿ ಸುಮಾರು 11 ಗಂಟೆ ವೇಳೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ರಂಗನಪಲ್ಕೆ ಕಡೆಗೆ ಬರುತ್ತಿದ್ದಾಗ ನಕ್ರೆ ಕಡೆಯಿಂದ ವೇಗವಾಗಿ ಬಂದ ಮಾರುತಿ ಸ್ವಿಫ್ಟ್ ಡಿಸೈರ್ ಕಾರು ಬಿನೇಶ್ವರ ನಾಗೇಶಿಯ ಎಂಬವರಿಗೆ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಅಪಘಾತದ ಬಳಿಕ ಕಾರು ಚಾಲಕ ಪರಾರಿಯಾಗಿದ್ದಾನೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.