ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಧಾರವಾಡ ಗ್ರಾಮಾಂತರ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ವಿರುದ್ಧದ ಅತ್ಯಾಚಾರ ಕೇಸ್ ಮತ್ತು ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ ಹಾಗೂ ಹಾವೇರಿ ಜಿಲ್ಲೆಯ ಮಹಿಳೆ ವಿರುದ್ದ ಶಾಸಕರು ದಾಖಲಿಸಿರುವ ಬ್ಲ್ಯಾಕ್ ಮೇಲ್ ಪ್ರಕರಣಗಳ ತನಿಖೆಯನ್ನು ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ)ಗೆ ಸರ್ಕಾರವು ವಹಿಸಿದೆ. ತನಗೆ ಜೀವ ಬೆದರಿಕೆ ಹಾಕಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಸಂಜಯನಗರ ಠಾಣೆಗೆ ಹಾವೇರಿ ಜಿಲ್ಲೆಯ ಮಹಿಳೆಯೊಬ್ಬರು ದೂರು ನೀಡಿದ್ದರು.
ಇದಕ್ಕೆ ಪ್ರತಿಯಾಗಿ ತನಗೆ 2 ಕೋಟಿ ರು.ಗೆ ಬ್ಲಾಕ್ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ಆ ಮಹಿಳೆ ಹಾಗೂ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ ರಾಕೇಶ್ ಶೆಟ್ಟಿ ವಿರುದ್ಧ ಶಾಸಕರು ದೂರು ದಾಖಲಿಸಿದ್ದಾರೆ. ಈ ಎರಡು ದೂರುಗಳನ್ನು ಸ್ವೀಕರಿಸಿ ಸಂಜಯನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಈ ಪ್ರಕರಣಗಳ ಕುರಿತು ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತು.