ನವದೆಹಲಿ: ದೇಶದ ಭದ್ರತೆಯ ವಿಚಾರದಲ್ಲಿ ಅತ್ಯಂತ ಚಾಣಾಕ್ಷ ನೀತಿಯಿಂದ ಹೆಸರುವಾಸಿಯಾಗಿರುವ ಅಜಿತ್ ದೋವಲ್ ಅವರನ್ನು ಮೂರನೇ ಅವಧಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಇಂದು ಮರು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಸಂಪುಟದ ನೇಮಕಾತಿ ಸಮಿತಿಯು ಜೂನ್ 10 ರಿಂದಲೇ ಜಾರಿಗೆ ಬರುವಂತೆ ದೋವಲ್ ಅವರ ನೇಮಕಾತಿಗೆ ಅನುಮೋದನೆ ನೀಡಿದೆ. ಅಜಿತ್ ದೋವಲ್ ನೇಮಕವು ಪ್ರಧಾನ ಮಂತ್ರಿಯವರ ಅಧಿಕಾರದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಊರ್ಜಿತದಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.