ಬೆಂಗಳೂರು: ಸಾರ್ವಜನಿಕರು ಸ್ಥಿರಾಸ್ತಿ ನೋಂದಣಿಗಾಗಿ ನಿರ್ದಿಷ್ಟ ಉಪ ನೋಂದಣಿ ಕಚೇರಿಯನ್ನೇ ನೆಚ್ಚಿಕೊಳ್ಳದೆ ಸಮೀಪದ ಅಥವಾ ಮತ್ತಾವುದೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಬಹುದಾದ ‘ಎನಿವೇರ್ ನೋಂದಣಿ’ ವ್ಯವಸ್ಥೆ ಸೆಪ್ಟೆಂಬರ್ ಮೊದಲ ವಾರದಿಂದಲೇ ರಾಜಾದ್ಯಂತ ಜಾರಿಯಾಗಲಿದೆ.
ರಾಜ್ಯ ವಿಧಾನಸಭೆಯ ಅಂದಾಜು ಸಮಿತಿಯು ನೋಂದಣಿ ಇಲಾಖೆ ನೀಡುವ ‘ಎನಿವೇರ್ ನೋಂದಣಿ’ ಸೇವೆಯನ್ನು ರಾಜ್ಯ ಮಟ್ಟದ ಕಾರ್ಯವಿಧಾನವಾಗಿ ವಿಸ್ತರಿಸುವುದಕ್ಕೆ ಮುಂದಾಗಿದೆ. ಸುಧಾರಿತ ಎನಿವೇರ್ ನೋಂದಣಿ ವ್ಯವಸ್ಥೆಯು ಬೆಂಗಳೂರಿನ ಜನತೆಗಷ್ಟೇ ಮಾತ್ರವಲ್ಲದೆ, ರಾಜ್ಯದ ಉಳಿದ ಜನರಿಗೂ ಸಿಗುವಂತಾಗಲು ರಾಜ್ಯಾದ್ಯಂತ ವಿಸ್ತರಿಸುವ ನಿಟ್ಟಿನಲ್ಲಿ ಪ್ರಯತ್ನಿಸುವಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದರು.
ಸದ್ಯ ಸ್ಥಿರಾಸ್ತಿ ನೋಂದಣಿಯನ್ನು ಸಂಬಂಧಪಟ್ಟ ಉಪ ನೋಂದಣಿ ಕಚೇರಿ ವ್ಯಾಪ್ತಿಯಲ್ಲೇ ಕೈಗೊಳ್ಳಬೇಕಾದ ವ್ಯವಸ್ಥೆ ಜಾರಿಯಲ್ಲಿದೆ. ಎನಿವೇರ್ ನೋಂದಣಿ ವ್ಯವಸ್ಥೆಯ ಅಡಿ ಯಾವುದೇ ವ್ಯಕ್ತಿಯು ನೋಂದಣಿ ದಸ್ತಾವೇಜನ್ನು ಜಿಲ್ಲೆಯ ವ್ಯಾಪ್ತಿಯ ಯಾವುದಾದರೂ ಉಪನೋಂದಣಿ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ‘ ಎನಿವೇರ್ ನೋಂದಣಿ ‘ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಬಹು ಕಚೇರಿ ಆಯ್ಕೆ ಸಿಗಲಿದ್ದು, ಒಂದೇ ಕಚೇರಿಯನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇರುವುದಿಲ್ಲ.
`