ಬೆಂಗಳೂರು :ರೇಣುಕಾಸ್ವಾಮಿ ಕೊಲೆ ಪ್ರಕರಣದ A2 ಆರೋಪಿ ನಟ ದರ್ಶನ್ ಅವರನ್ನು ಮುಲಾಜಿಲ್ಲದೇ ಬಂಧಿಸಿದ್ದ ಕಾಮಾಕ್ಷಿಪಾಳ್ಯದ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿದೆ.
ನಟಿ ಪವಿತ್ರಾಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಾರೆಂಬ ಕೋಪಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿ ಬಿಸಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಜಿಮ್ ಮಾಡುತ್ತಿದ್ದ ನಟ ದರ್ಶನ್ನನ್ನು ಯಾರ ಒತ್ತಡಕ್ಕೂ ಮಣಿಯದೇ ಮುಲಾಜಿಲ್ಲದೇ ವಶಕ್ಕೆ ಪಡೆದು, ಅರೆಸ್ಟ್ ಮಾಡಿದ್ದರು. ಕೋರ್ಟ್ನಿಂದ ಪೊಲೀಸ್ ಕಸ್ಟಡಿಗೆ ಪಡೆದು ಸ್ಥಳ ಮಹಜರ್ ಮಾಡಲಿಕ್ಕೂ ದರ್ಶನ್ ಹಾಗೂ ಅವರ ಗ್ಯಾಂಗ್ನ 13 ಜನರನ್ನೂ ಕರೆದೊಯ್ಯಲಾಗಿತ್ತು.
ಚಿತ್ರದುರ್ಗದ ಸಾಮಾನ್ಯ ವ್ಯಕ್ತಿ ರೇಣುಕಾಸ್ವಾಮಿ ಕೊಲೆ ಮಾಡಿದ ನಂತರ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೃತದೇಹ ಎಸೆದ ಆರೋಪಿಗಳು, ನಂತರ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಸರೆಂಡರ್ ಆಗಿದ್ದರು. ಕಾಮಾಕ್ಷಿಪಾಳ್ಯ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರು, ಸರೆಂಡರ್ ಆಗಿದ್ದ ಕೊಲೆ ಆರೋಪಿಗಳನ್ನು ವಿಚಾರಣೆ ಮಾಡಿದಾಗ, ನಟ ದರ್ಶನ್ನನ್ನು ಉಳಿಸಲು ಹತ್ತಾರು ಕಥೆ ಕಟ್ಟಿದ್ದಾರೆ. ನಂತರ, ಆರೋಪಿಗಳ ಫೋನ್ ಕಾಲ್ ಡಿಟೇಲ್ಸ್ ಮತ್ತಿತರ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಸುಳ್ಳು ಹೇಳುತ್ತಿರುವುದು ತಿಳಿದಿದೆ. ಆಗ ಪೊಲೀಸರು ತಮ್ಮದೇ ಸ್ಟೈಲ್ನಲ್ಲಿ ವಿಚಾರಣೆ ಮಾಡಿದಾಗ ನಟ ದರ್ಶನ್ ಮತ್ತು ಆತನ ಪತ್ನಿ ಪವಿತ್ರಾಗೌಡ ಪಾತ್ರದ ಕುರಿತು ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಇತ್ತ
ನಟ ದರ್ಶನ್ ಹೆಸರು ಈ ಪ್ರಕರಣದಲ್ಲಿ ಥಳುಕು ಹಾಕುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಕಾಮಾಕ್ಷಿಪಾಳ್ಯ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರು ಹಿರಿಯ ಅಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಮಾಹಿತಿ ನೀಡಿದ್ದಾರೆ. ನಂತರ, ನಟ ದರ್ಶನ್ ಕೊಲೆ ಕೇಸಿನಲ್ಲಿ ಪಾಲ್ಗೊಂಡ ಬಗ್ಗೆ ಕೆಲವು ಸಾಕ್ಷ್ಯಗಳನ್ನು ಸಂಗ್ರಹಿಸಿ ನೇರವಾಗಿ ಮೈಸೂರಿಗೆ ತೆರಳಿ ಬೆಳ್ಳಂಬೆಳಗ್ಗೆ ಜಿಮ್ ಮಾಡುತ್ತಿದ್ದ ನಟ ದರ್ಶನ್ನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದರು. ಇದಾದ ನಂತರ, ಪೊಲೀಸರಿಗೆ ಸಿಕ್ಕ ಸಾಕ್ಷ್ಯಗಳಲ್ಲಿ ರೇಣುಕಾಸ್ವಾಮಿ ಕೊಲೆಯಲ್ಲಿ ನಟ ದರ್ಶನ್ ಕೈವಾಡ ಇರುವುದೂ ತಿಳಿಯುತ್ತಿದ್ದಂತೆ, ಅರೆಸ್ಟ್ ಮಾಡಿದ್ದರು. ನಂತರ ಕಾನೂನು ಪ್ರಕ್ರಿಯೆಯಂತೆ ವೈದ್ಯಕೀಯ ಪರೀಕ್ಷೆ ನಡೆಸಿ,ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯುವುದು ಹಾಗೂ ಸ್ಥಳ ಮಹಜರು ಮಾಡುವುದು ಎಲ್ಲಾ ಕಾರ್ಯವನ್ನೂ ಮಾಡಿದ್ದರು. ಆದರೆ, ಇದೀಗ ಸರ್ಕಾರ ಏಕಾಏಕಿ ತನಿಖಾಧಿಕಾರಿಯನ್ನೇ ಬದಲಾವಣೆ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಇಂದಿನಿಂದಲೇ ತನಿಖಾಧಿಕಾರಿ ಬದಲಾವಣೆ: ರೇಣುಕಾಸ್ವಾಮಿ ಕೊಲೆ ಕೇಸ್ ನೂತನ ತನಿಖಾಧಿಕಾರಿಯಾಗಿ ವಿಜಯನಗರ ಉಪವಿಭಾಗ ಎಸಿಪಿ ಚಂದನ್ ನೇಮಕವಾಗಿದ್ದಾರೆ. ಇಷ್ಟು ದಿನ ಕಾಮಾಕ್ಷಿಪಾಳ್ಯ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ ತನಿಖಾಧಿಕಾರಿಯಾಗಿದ್ದರು. ಇಂದಿನಿಂದ ಎಸಿಪಿ ಚಂದನ್ ತನಿಖಾಧಿಕಾರಿಯಾಗಿ ನೇಮಕವಾಗಿದ್ದಾರೆ. ಈ ಹಿಂದೆ ಚುನಾವಣೆ ಹಿನ್ನಲೆಯಲ್ಲಿ ಇನ್ಸ್ ಪೆಕ್ಟರ್ ಗಿರೀಶ್ ನಾಯ್ಕ್ ಅವರು ಕಾಮಾಕ್ಷಿಪಾಳ್ಯಕ್ಕೆ ವರ್ಗಾವಣೆ ಆಗಿದ್ದರು. ಆದರೆ, ಕಳೆದ ಎರಡು ದಿನಗಳ ಹಿಂದೆ ಪುನಃ ವಾಪಸ್ ತಮ್ಮ ಠಾಣೆಗಳಿಗೆ ಹೋಗಲು ಆದೇಶ ಬಂದಿತ್ತು. ಹೀಗಾಗಿ ಮುಂದಿನ ತನಿಖೆ ದೃಷ್ಟಿಯಿಂದ ತನಿಖಾಧಿಕಾರಿ ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.