Share this news

ಬೆಂಗಳೂರು:ಕಳೆದ 8 ವರ್ಷಗಳ ಹಿಂದೆ ಶಿವಾಜಿನಗರದಲ್ಲಿ ನಡೆದಿದ್ದ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್‌ ಹತ್ಯೆಯಲ್ಲಿ ಭಾಗಿಯಾಗಿ ಪೂರ್ವ ಆಫ್ರಿಕಾದ ತಾಂಜಾನಿಯಾದಲ್ಲಿ ಅಡಗಿಕೊಂಡಿದ್ದ ಪಾತಕಿಯನ್ನು ಎನ್‌ಐಎ ಬಂಧಿಸಿದೆ.
ಬೆಂಗಳೂರು ಆರ್‌.ಟಿ ನಗರದ ಮೊಹಮದ್‌ ಗೌಸ್‌ ನಯಾಜಿ ಬಂಧಿತ ಆರೋಪಿಯಾಗಿದ್ದಾನೆ. ಶಿವಾಜಿನಗರದ ಕಾಮರಾಜ ರಸ್ತೆಯಲ್ಲಿ 2016ರ ಅ 16ರಂದು ಆರೆಸ್ಸೆಸ್ ಪಥಸಂಚಲನ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಆರ್‌.ರುದ್ರೇಶ್‌ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದಿದ್ದರು. ಈ ಕೃತ್ಯದಲ್ಲಿ ಪಾಲ್ಗೊಂಡಿದ್ದ ಮೊಹಮದ್‌ ಗೌಸ್‌ ನಯಾಜಿ ತಲೆಮರೆಸಿಕೊಂಡಿದ್ದ. ಈತನ ಬಂಧನಕ್ಕೆ ಎನ್‌ಐಎ ಹುಡುಕಾಡುತ್ತಲೇ ಇತ್ತು. ಕೃತ್ಯದ ಬಳಿಕ ದೇಶ ತೊರೆದಿದ್ದ ನಯಾಜಿ, ಕೆಲ ವರ್ಷ ಅರಬ್‌ ರಾಷ್ಟ್ರಗಳಲ್ಲಿ ತಲೆಮರೆಸಿಕೊಂಡಿದ್ದ. ನಂತರ ಪೂರ್ವ ಆಫ್ರಿಕಾದ ತಾಂಜಾನಿಯಾಕ್ಕೆ ತೆರಳಿ ಹೆಸರು ಬದಲಿಸಿಕೊಂಡು ಆಶ್ರಯ ಪಡೆದಿದ್ದ. ಈ ಮಾಹಿತಿಯನ್ನು ಎನ್‌ಐಎ ಕಲೆಹಾಕಿತ್ತು. ಬಳಿಕ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಎನ್‌ಐಎ ಕೇಂದ್ರ ಗೃಹ ಇಲಾಖೆಯು ಆ ದೇಶದೊಂದಿಗೆ ರಾಜತಾಂತ್ರಿಕ ಸಂವಹನ ನಡೆಸಿ ಎನ್ಐಎ ಆತನನ್ನು ಸೆರೆ ಹಿಡಿದಿದೆ.
ಮಾಸ್ಟರ್‌ ಮೈಂಡ್‌ ನಯಾಜಿ ನಿಷೇಧಿತ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದ ಪಾತಕಿ ನಯಾಜಿ ಎಸ್‌ಡಿಪಿಐ ಹೆಬ್ಬಾಳ ಘಟಕದ ಅಧ್ಯಕ್ಷನಾಗಿದ್ದ. ಶಿವಾಜಿನಗರದಲ್ಲಿ ಆರೆಸ್ಸೆಸ್ ಚಟುವಟಿಕೆ ವಿಸ್ತರಣೆಯಾಗುತ್ತಿರುವುದಕ್ಕೆ ತೀವ್ರ ಅಸಮಾಧಾನಗೊಂಡಿದ್ದ. ಜತೆಗೆ, ಆರೆಸ್ಸೆಸ್ ಚಟುವಟಿಕೆಗಳನ್ನು ನಿಯಂತ್ರಿಸಲು ತನ್ನ ಸಹಚರರ ಜತೆ ಸೇರಿ ದುಷ್ಕೃತ್ಯ ಎಸಗಲು ಸಂಚು ರೂಪಿಸಿದ್ದ. ಇದರ ಫಲವಾಗಿಯೇ ಗೋವಿಂದಪುರದ ಇರ್ಫಾನ್‌ ಪಾಷಾ, ಆಸ್ಟಿನ್‌ಟೌನ್‌ನ ವಸೀಂ ಅಹಮದ್‌, ಮಾರಪ್ಪ ಗಾರ್ಡನ್‌ ನಿವಾಸಿ ಮೊಹಮದ್‌ ಸಾದಿಕ್‌, ಮೊಹಮದ್‌ ಮುಜೀಬುಲ್ಲಾ ಸೇರಿ ಹಲವರ ಜತೆ ಸಭೆ ನಡೆಸಿದ್ದು, ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಗೆ ಯೋಜನೆ ರೂಪಿಸಿದ್ದ ಎಂದು ಮೂಲಗಳು ಹೇಳಿವೆ. ಪೂರ್ವನಿಯೋಜಿತ ಸಂಚಿನ ಪ್ರಕಾರ 2016ರ ಅ 16ರಂದು ಹಾಡಹಗಲೇ ಆರ್‌ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್‌ನನ್ನು ಬೈಕ್‌ನಲ್ಲಿ ಹಿಂಬಾಲಿಸಿದ್ದ ದುಷ್ಕರ್ಮಿಗಳು ಲಾಂಗ್‌ನಿಂದ ತಲೆಗೆ ಹೊಡೆದು ಹತ್ಯೆಗೈದಿದ್ದರು. ಈ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಇರ್ಫಾನ್‌ ಪಾಷಾ, ಮುಜೀಬುಲ್ಲಾ ಸೇರಿ ಇತರರನ್ನು ಬಂಧಿಸಿದ್ದರು. ಬಳಿಕ ಪ್ರಕರಣದ ತನಿಖೆ ನಡೆಸಿದ್ದ ಎನ್‌ಐಎ ಆರೋಪಿಗಳ ವಿರುದ್ಧ ಭಯೋತ್ಪಾದನಾ ಚಟುವಟಿಕೆಗಳ ಕಾಯಿದೆಯಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

 

Leave a Reply

Your email address will not be published. Required fields are marked *