
ಕಾರ್ಕಳ,ಡಿ.03: ಪ್ರಸ್ತುತ ದಿನಮಾನಗಳಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಗ್ನಿ ಅವಘಡ, ಪ್ರಕೃತಿ ವಿಕೋಪಗಳಿಂದ ಸಂಭವಿಸಬಹುದಾದ ದುರ್ಘಟನೆಗಳಿಂದ ನಾವು ಹೇಗೆ ಸುರಕ್ಷಿತರಾಗಿ ನಮ್ಮನ್ನು ಕಾಪಾಡಿಕೊಳ್ಳಬೇಕು ಎಂಬ ಅರಿವನ್ನು ಮೂಡಿಸುವಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ‘ಸುರಕ್ಷತೆ ಮೊದಲು’ ಎಂಬ ಜನಜಾಗೃತಿ ಅಭಿಯಾನ ಕಾರ್ಯಕ್ರಮ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಂಗಳೂರಿನ ವೃತ್ತಿಪರ ಅಗ್ನಿಶಾಮಕ ಮತ್ತು ಸುರಕ್ಷತಾ ಅಧಿಕಾರಿಯಾದ ಸತ್ಯರಾಜ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಾತ್ಯಕ್ಷಿಕೆಗಳ ಮೂಲಕ ಸುರಕ್ಷತೆಯ ಬಗ್ಗೆ ಅರಿವನ್ನು ಮೂಡಿಸಿದರು. ಬೆಂಕಿಯಿಂದ,ನೀರಿನಿಂದ ಮತ್ತು ಅಪಘಾತಗಳು ಸಂಭವಿಸಿದಾಗ ಯಾವ ರೀತಿಯಾಗಿ ಪ್ರತಿಕ್ರಿಯಿಸಬೇಕು ಎಂಬುವುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿ ಭಯ ಮುಕ್ತರಾಗಿ ಅದನ್ನು ಎದುರಿಸುವಲ್ಲಿ ನಾವು ಹೇಗೆ ಸಿದ್ಧರಿರಬೇಕೆಂಬುದನ್ನು ತಿಳಿಯಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಹ ಸಂಸ್ಥಾಪಕರು ಮತ್ತು ಸಂಸ್ಥೆಯ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ರವರು ತುರ್ತು ಸಂದರ್ಭದಲ್ಲಿ ಸರಿಯಾಗಿ ಪ್ರತಿಕ್ರಿಯಿಸಿದ್ದಲ್ಲಿ ಮಾತ್ರ ಜೀವ ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಮಗೆ ಮುಂಜಾಗೃತ ಕ್ರಮಗಳ ಬಗ್ಗೆ ತಿಳುವಳಿಕೆ ಇರಬೇಕೆಂದು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕ ವರ್ಗದವರು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ಭಾಷಾ ಉಪನ್ಯಾಸಕರಾದ ಸಂತೋಷ್ ನಿರೂಪಿಸಿ ವಂದಿಸಿದರು.
.
.
