ಕಾರ್ಕಳ:ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಒಂದಲ್ಲಾ ಒಂದು ಆದ್ವಾನ ನಿತ್ಯನಿರಂತರವಾಗಿದ್ದು ,ಇದೀಗ ಸಾಣೂರು ಸರ್ಕಾರಿ ಪ್ರೌಢಶಾಲಾ ಕಟ್ಟಡ ಹಾಗೂ ಆವರಣ ಗೋಡೆ ಹಾಗೂ ರಸ್ತೆ ಕುಸಿಯುವ ಭೀತಿಯಲ್ಲಿದ್ದು, ಗ್ರಾಮಸ್ಥರು ಕಂಪನಿಯ ವಿರುದ್ಧ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.
ಈಗಾಗಲೇ ಪ್ರೌಢಶಾಲೆಯ ಜಾಗ ಭೂಸ್ವಾಧೀನ ಪ್ರಕ್ರಿಯೆ ಪ್ರಕಾರ ಬಿಟ್ಟುಕೊಟ್ಟರೂ ಪರಿಹಾರ ಸಿಕ್ಕಿಲ್ಲ,ಶಾಲಾ ಕಟ್ಟಡಗಳ ಪಕ್ಕದಲ್ಲಿಯೇ ಜಮೀನನ್ನು ಅಗೆದು, ರಸ್ತೆ ನಿರ್ಮಾಣ ಮಾಡಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಿಂದ ವಿದ್ಯಾಸಂಸ್ಥೆಗೆ ಹೋಗುವ ಮಣ್ಣಿನ ಹಾದಿ ಸಂಪೂರ್ಣ ಹಾಳಾಗಿದ್ದು, ದಿನಂಪ್ರತಿ ನೂರಾರು ವಿದ್ಯಾರ್ಥಿಗಳು ಅಧ್ಯಾಪಕರು ಸಂಚರಿಸುವ ರಸ್ತೆ ಕುಸಿಯುವ ಭೀತಿಯಲ್ಲಿದೆ. ಈಗಾಗಲೇ ದಾನಿಗಳಿಂದ ನಿರ್ಮಾಣಗೊಂಡ ಕಾಂಕ್ರೀಟ್ ಪ್ರವೇಶ ದ್ವಾರ, ಆವರಣ ಗೋಡೆ, ಗೇಟ್ ತೆರವುಗೊಳಿಸಲಾಗಿದೆ.ಮಾತ್ರವಲ್ಲದೇ ಶಾಲಾ ವಿದ್ಯಾರ್ಥಿಗಳಿಗೆ ನಿರ್ಮಿಸಲಾಗಿದ್ದ ತಂಗುದಾಣವನ್ನು ಕೂಡ ಧ್ವಂಸಗೊಳಿಸಲಾಗಿದ್ದು, ವಿದ್ಯಾರ್ಥಿಗಳು ಬಿಸಿಲಲ್ಲೇ ಬಸ್ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.
ಆದ್ದರಿಂದ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ದಿಲೀಪ್ ಬಿಲ್ಡ್ ಕ್ರಾನ್ ಸಂಸ್ಥೆ ಶಾಲೆಯ ಮೂಲಸೌಕರ್ಯಗಳನ್ನು ಮರುಸ್ಥಾಪಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಶಾಲಾ ಅಭಿವೃದ್ಧಿ ಸಮಿತಿಯವರು,ಹಳೆ ವಿದ್ಯಾರ್ಥಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಶೋಕ್ ಶೆಟ್ಟಿ, ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಎಚ್ಚರಿಸಿದ್ದಾರೆ