ಕಾರ್ಕಳ: ನೀರಿನ ಟ್ಯಾಂಕ್ ಏರಿ ಕೆಳಗಿಳಿದು ಸ್ವಚ್ಛಗೊಳಿಸುತ್ತಿದ್ದಾಗ ಕೆಸರಿನಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡು ಮೇಲಕ್ಕೆ ಬರಲಾಗದೇ ಒದ್ದಾಡುತ್ತಿದ್ದ ಇಬ್ಬರು ಕಾರ್ಮಿಕರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ಮಾಡಿ ರಕ್ಷಿಸಿದ ಘಟನೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮುರತ್ತಂಗಡಿ ಎಂಬಲ್ಲಿ ಸಂಭವಿಸಿದೆ.
ಸಾಣೂರು ಮುರತ್ತಂಗಡಿ ಪ್ರಕೃತಿ ವಿದ್ಯಾ ಸಂಸ್ಥೆ ಬಳಿಯ ಗುಡ್ಡದ ಮೇಲಿರುವ ಟ್ಯಾಂಕ್ ಸ್ವಚ್ಛತೆಗೆಂದು ಕಾರ್ಮಿಕರಾದ ಸತೀಶ್(35) ಹಾಗೂ ಸುನಿಲ್(38) ಎಂಬವರು ಇಳಿದಿದ್ದರು. ಟ್ಯಾಂಕಿನಲ್ಲಿದ್ದ ಕೆಸರು ಮಣ್ಣನ್ನು ಸ್ವಚ್ಚಗೊಳಿಸುವ ಕಾಲು ಜಾರಿ ಬಿದ್ದು ಗಾಯಗೊಂಡು ಮೇಲಕ್ಕೆ ಬರಲಾಗದೇ ಸಹಾಯಕ್ಕಾಗಿ ಕೂಗಿದ್ದಾರೆ.
ಬಳಿಕ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ತಿಳಿಸಿದ್ದು, ತಕ್ಷಣವೇ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಏಣಿ ಹಾಗೂ ಹಗ್ಗದ ಸಹಾಯದಿಂದ ಇಬ್ಬರನ್ನೂ ರಕ್ಷಣೆ ಮಾಡಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್ , ಸಹಾಯಕ ಅಗ್ನಿಶಾಮಕ ಅಧಿಕಾರಿ ಚಂದ್ರ ಶೇಖರ್, ಸಿಬ್ಬಂದಿಯವರಾದ ರೂಪೇಶ್ ಇರೂಡ್ಕರ್, ಹರಿಪ್ರಸಾದ್ ಶೆಟ್ಟಿಗಾರ್, ಸಂಜಯ್, ಭೀಮಪ್ಪ ನರಹಟ್ಟಿರವರು ಪಾಲ್ಗೊಂಡಿದ್ದರು.