

ಕಾರ್ಕಳ: ಕಳೆದ 2 ವರ್ಷಗಳಿಂದ ಸಾಣೂರಿನ ಚಿಲಿಂಬಿ ಅರಣ್ಯ ಪ್ರದೇಶದಲ್ಲಿನ ಹೆದ್ದಾರಿ ಕಾಮಗಾರಿಗೆ ಎದುರಾಗಿದ್ದ ಸಮಸ್ಯೆ ಇದೀಗ ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರ ವಿಶೇಷ ಪ್ರಯತ್ನದಿಂದ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅನುಮತಿ ದೊರೆತಿದೆ. ಸಾಣೂರಿನಿಂದ ಮಂಗಳೂರು ಬಿಕರ್ನಕಟ್ಟೆ ವರೆಗಿನ 45 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಕಾಂತಾವರ ಗ್ರಾಮದ ಸರ್ವೇ ನಂಬರ್ 216,269 ಮತ್ತು 347 ಹಾಗೂ ಸಾಣೂರು ಗ್ರಾಮದ ಸ.ನ 304 ರಲ್ಲಿ ಒಟ್ಟು 3.6381 ಹೆಕ್ಟೇರ್ ಅರಣ್ಯ ಭೂಮಿಯನ್ನು “ಭಾರತ ಮಾಲಾ ಯೋಜನೆಯ” ಡಿಯಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಬಳಸಿಕೊಳ್ಳಲು ಅನುಮತಿಯನ್ನು ಕೋರಿ ಕೇಂದ್ರ ಅರಣ್ಯ ಸಚಿವಾಲಯಕ್ಕೆ 27 ನವಂಬರ್ 2024 ರಂದು ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು.
ಹಲವಾರು ತಾಂತ್ರಿಕ ಅಡಚಣೆಗಳಿಂದ ಕೇಂದ್ರ ಸಚಿವಾಲಯದ ಅನುಮತಿ ಸಿಗದೆ, ಸಾಣೂರು ಕಾಂತಾವರ ಗಡಿಭಾಗದ ಸುಮಾರು 1.5 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಹೆದ್ದಾರಿ ಯೋಜನೆಗೆ ತೀವ್ರ ಹಿನ್ನಡೆಯಾಗಲಿದ್ದ ಈ ವಿಚಾರವನ್ನು ಸಾಣೂರು ಗ್ರಾಮಸ್ಥರು ಮತ್ತು ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರು ಉಡುಪಿಯ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿಯವರ ಗಮನಕ್ಕೆ ತಂದಾಗ ಕೂಡಲೇ ಕಾರ್ಯಪ್ರವೃತ್ತರಾದ ಸಂಸದರು ಈ ಬಗ್ಗೆ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಪತ್ರ ಬರೆದು, ಆದ್ಯತೆಯ ಮೇರೆಗೆ ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ ಕೂಡಲೇ* ಯೋಜನೆಗೆ ತಾತ್ವಿಕ ಅನುಮತಿಯನ್ನು ನೀಡುವಂತೆ ಒತ್ತಾಯಿಸಿದ್ದರು .
ಇದೀಗ ಕೇಂದ್ರ ಅರಣ್ಯ ಸಚಿವಾಲಯವು ಕುಂದಾಪುರ ಅರಣ್ಯ ವಿಭಾಗ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ ಸುತ್ತಮುತ್ತಲಿನ ಅರಣ್ಯ ಪ್ರದೇಶಕ್ಕೆ ಒತ್ತಡ ಬೀಳದಂತೆ ಯಾವುದಂತೆ ಭೂಕುಸಿತ ವಾಗದಂತೆ ಎಚ್ಚರಿಕೆ ವಹಿಸಿ ಹೆದ್ದಾರಿಯ ಎರಡೂ ಬದಿಗಳಲ್ಲಿ ಸಾಲು ಮರಗಳನ್ನು ಬೆಳೆಸಬೇಕು ಮುಂತಾದ ಹಲವಾರು ಅಗತ್ಯ ನಿಬಂಧನೆಗಳೊಂದಿಗೆ ಕಾಮಗಾರಿ ನಡೆಸಲು ತಾತ್ವಿಕ ಅನುಮತಿ ನೀಡಿದೆ.
ಸಂಸದ ಕೋಟಾ ಶ್ರೀನಿವಾಸ ಪೂಜಾರಿಯವರ ಜನಪರ ಕಾಳಜಿಯ ಈ ವಿಶೇಷ ಪ್ರಯತ್ನಕ್ಕೆ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ
ಸಾಣೂರು ನರಸಿಂಹ ಕಾಮತ್ ಮತ್ತು ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯುವರಾಜ್ ಜೈನ್ ಸಾಣೂರು ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.


