ಕಾರ್ಕಳ: ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಹಕಾರಿ ತತ್ವದಲ್ಲಿ 2016ರಲ್ಲಿ ಆರಂಭಗೊಂಡ ಸ್ವರ್ಣ ಗ್ರಾಮೀಣ ಸೌಹಾರ್ದ ಸಹಕಾರಿ ಸಂಘವು ತನ್ನ ಯಶಸ್ವೀ 8 ವರ್ಷಗಳನ್ನು ಪೂರೈಸಿ ಇದೀಗ 9ನೇ ವರ್ಷಕ್ಕೆ ಕಾಲಿಟ್ಟಿದೆ. ಮಿಯ್ಯಾರು ಗ್ರಾಮದ ಜೋಡುಕಟ್ಟೆಯಲ್ಲಿ ಕಚೇರಿ ಹೊಂದಿರುವ ಸ್ವರ್ಣ ಗ್ರಾಮೀಣ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂಘದ ಸದಸ್ಯರಿಗೆ ಆನ್‌ಲೈನ್ ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ನೀಡುವ ವಿನೂತನ ತಂತ್ರಜ್ಞಾನ ಯೂನಿಗ್ಸ್ ಮೊಬೈಲ್ ಆ್ಯಪ್ ಲೋಕಾರ್ಪಣೆ ಕಾರ್ಯಕ್ರಮವು ಸೆ.22 ರಂದು ಜೋಡುಕಟ್ಟೆಯ ಸ್ವರ್ಣ ಗ್ರಾಮೀಣ ಸೌಹಾರ್ದ ಸಹಕಾರಿ ಸಂಘದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಶೇಕ್ ಶಬ್ಬೀರ್ ಹೇಳಿದರು.
ಅವರು ಕಾರ್ಕಳದ ಹೊಟೇಲ್ ಪ್ರಕಾಶ್ ನಲ್ಲಿ ಸುದ್ಧಿಗೋಷ್ಠಿ ನಡೆಸಿ, ಸಂಘದ ಬೆಳವಣಿಗೆಯ ಕುರಿತು ಮಾಹಿತಿ ನೀಡಿದರು. ಸಂಘದಲ್ಲಿ ಸುಮಾರು 5 ಸಾವಿರದಷ್ಟು ಸದಸ್ಯರಿದ್ದು, ಕಳೆದ ಆರ್ಥಿಕ ವರ್ಷದಲ್ಲಿ 6 ಕೋಟಿಗೂ ಅಧಿಕ ವಹಿವಾಟು ನಡೆಸಿದ್ದು ಸುಮಾರು 20,60,418 ರೂ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ 6% ಡಿವಿಡೆಂಡ್ ನೀಡಲಾಗುತ್ತದೆ. ಸಂಘದಲ್ಲಿ 4,76,32,366 ರೂ ಠೇವಣಿಯಿದ್ದು, 3,81,52,814 ರೂ ಸಾಲ ನೀಡಲಾಗಿದೆ. ಗ್ರಾಹಕರಿಗೆ ನಗು ಮೊಗದ ಸೇವೆಯೇ ನಮ್ಮ ಗುರಿಯಾಗಿದ್ದು, ನಮ್ಮಲ್ಲಿ ಅಡಮಾನ ಸಾಲ, ಚಿನ್ನಾಭರಣ ಸಾಲ, ವ್ಯಾಪಾರ ಸಾಲ ನೀಡಲಾಗುತ್ತದೆ ಎಂದರು.
ಸಂಘದ ವ್ಯವಹಾರದಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಸಹಕಾರಿ ಕ್ಷೇತ್ರದಲ್ಲೇ ಇದೇ ಮೊದಲ ಬಾರಿಗೆ ಆನ್‌ಲೈನ್ ಮೊಬೈಲ್ ಬ್ಯಾಂಕಿಂಗ್ ಸೇವೆಗಳ ಮೂಲಕ ವಹಿವಾಟು ನಡೆಸಲು UNIGS ಮೊಬೈಲ್ ಆ್ಯಪ್ ಅನಾವರಣ ಮಾಡಲಾಗುತ್ತದೆ ಎಂದರು. ಈ ಆ್ಯಪ್ ಮೂಲಕ ಗ್ರಾಹಕರು ತಮ್ಮ ಉಳಿತಾಯ, ಪಿಗ್ಮಿ, ಆರ್,ಡಿ, ಸಾಲದ ಕಂತುಗಳ ವಿವರಗಳನ್ನು ಮೊಬೈಲ್ ಮೂಲಕ ಪಡೆಯಬಹುದಾಗಿದೆ ಮಾತ್ರವಲ್ಲದೇ ಮೊಬೈಲ್ ಮೂಲಕ ಹಣವನ್ನು ಜಮೆ ಮಾಡಬಹುದಾಗಿದೆ,ಪ್ರಮುಖವಾಗಿ ಸದಸ್ಯರಿಗೆ ವ್ಯವಹಾರ ನಿರ್ವಹಿಸಲು ಸುಲಭವಾಗುವ ನಿಟ್ಟಿನಲ್ಲಿ ಇಂಗ್ಲೀಷ್ ಜತಗೆ ಕನ್ನಡ ಭಾಷೆಯಲ್ಲೂ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸುಧಾಕರ ಪೂಜಾರಿ, ನಿರ್ದೇಶಕರಾದ ಸತೀಶ್ ಪೂಜಾರಿ, ಉದಯ ಕುಮಾರ್ ಹೆಗ್ಡೆ, ರಮೇಶ್ ಶೆಟ್ಟಿ,ಸಂತೋಷ್ ಪೂಜಾರಿ ಹಾಗೂ ಕಾರ್ಯನಿರ್ವಹಣಾಧಿಕಾರಿ ನಿರೋಷಾ ಶೆಟ್ಟಿ ಉಪಸ್ಥಿತರಿದ್ದರು.
in