
ಬೆಂಗಳೂರು : ಭಾರತ ಹಾಗೂ ಪಾಕಿಸ್ತಾನ ನಡುವೆ ಸಂಘರ್ಷ ತಾರಕಕ್ಕೇರಿದ್ದು ಈ ಹಿನ್ನಲೆಯಲ್ಲಿ ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ತಿಳಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆಗಿಂತ ಹೆಚ್ಚಾಗಿ, ಯುದ್ಧ ಭೀತಿ ಇದೆ. ಗಡಿ ಪ್ರದೇಶದಲ್ಲಿ ಆಗುತ್ತಿರುವ ಚಟುವಟಿಕೆಗಳು, ಉಗ್ರರ ವಿರುದ್ಧ ಸೇನಾ ಪಡೆ ಕ್ರಮ ತೆಗೆದುಕೊಂಡಿದೆ. ಈ ಪರಿಸ್ಥಿತಿ ಹೆಚ್ಚಾದರೆ ಯುದ್ದದ ಪರಿಸ್ಥಿತಿ ಬರಬಹುದು ಎಂಬುದನ್ನು ಕೇಂದ್ರ ಸರ್ಕಾರ ಪ್ರತಿಯೊಂದು ರಾಜ್ಯ ಸರ್ಕಾರಗಳಿಗೆ ಕೆಲವು ಸೂಚನೆಗಳನ್ನು ನೀಡಿದೆ. ಅದರ ಹಿನ್ನೆಲೆಯಲ್ಲಿ ಈಗಾಗಲೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.
ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ನಾಗರಿಕರ ಸುರಕ್ಷತೆಗೆ ಒತ್ತು ನೀಡಲಾಗಿದೆ ಅಲ್ಲದೇಪ್ರತಿಯೊಂದು ನಗರ, ಪಟ್ಟಣದಲ್ಲಿ ಜಾಗೃತಿ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದರು.
ಮುಖ್ಯಮAತ್ರಿ ಅಧ್ಯಕ್ಷತೆಯಲ್ಲಿ ಇಂದು ಸಂಜೆ 4 ಗಂಟೆಗೆ ಸಭೆ ಕರೆದಿದ್ದಾರೆ. ತುರ್ತ ಪರಿಸ್ಥಿತಿಯ ಸನ್ನಿವೇಶ ಬಂದರೆ ನೀರು, ಆಹಾರ ಧಾನ್ಯ , ಆಸ್ಪತ್ರೆ ಸೇರಿ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ. ಗೃಹ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುತ್ತೇವೆ. ನಿನ್ನೆಯಿಂದ ಈಚೆಗೆ ಕೇಂದ್ರ ಸರ್ಕಾರದಿಂದ ಯಾವುದಾದರೂ ಸೂಚನೆಗಳು ಬಂದಿದ್ದರೆ, ಅದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಸಧ್ಯಕ್ಕೆ ಯುದ್ಧ ಪರಿಸ್ಥಿತಿ ಇರುವ ಹಿನ್ನಲೆಯಲ್ಲಿ ಪೊಲೀಸರ ರಜೆ ರದ್ದುಪಡಿಸಲಾಗಿದೆ. ಸದ್ಯಕ್ಕೆ ಯಾವುದೇ ರಜೆ ಇಲ್ಲ. ಪರಿಸ್ಥಿತಿ ಸಹಜಸ್ಥಿತಿಗೆ ಬಂದಿದೆ ಎನ್ನುವ ಕೇಂದ್ರ ಸರ್ಕಾರ ಸೂಚನೆಯವರೆಗೆ ನಾವು ಸೂಕ್ಷ್ಮವಾಗಿರಬೇಕು ಎಂದರು.ಕರಾವಳಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗುತ್ತದೆ. ಕರಾವಳಿಯಲ್ಲಿ ಬಿಗಿ ಭದ್ರತೆ ವಹಿಸಿದ್ದೇವೆ. ಮಂಗಳೂರು, ಉತ್ತರ ಕನ್ನಡದಲ್ಲಿ ನಿಗಾ ವಹಿಸಲಾಗಿದೆ. ಪೊಲೀಸ್ ಇಲಾಖೆ ಎಲ್ಲಾ ಕ್ರಮ ವಹಿಸಿದೆ. ನೇವಿ ಅವರು ಕೂಡ ಭದ್ರತೆ ವಹಿಸಿದ್ದಾರೆ ಎಂದರು.
  




