ಕಾರ್ಕಳ: ಒಬ್ಬ ಮುಖ್ಯಮಂತ್ರಿಯಾಗಿ ಸದನಕ್ಕೆ ತಪ್ಪು ಮಾಹಿತಿ ನೀಡಿದ ಸಿದ್ದರಾಮಯ್ಯನವರಿಗೆ ನಾಚಿಕೆಯಾಗಬೇಕು. ಕಾರ್ಕಳದ ಪರಶುರಾಮ ಥೀಂಪಾರ್ಕ್ ನಲ್ಲಿ 11 ಕೋಟಿ ರೂ. ಹಗರಣವಾಗಿದೆ ಎಂದು ವಿಧಾನಸಭಾ ಕಲಾಪದಲ್ಲಿ ನೀವು ನನ್ನ ವಿರುದ್ಧ ಆರೋಪಿಸಿದ್ದೀರಿ. ಆದರೆ ಈ ಯೋಜನೆಗೆ ಇದುವರೆಗೆ ಬಿಡುಗಡೆಯಾಗಿದ್ದೇ 6 ಕೋಟಿ ರೂ!. ಯಾವ ಆಧಾರದಲ್ಲಿ 11 ಕೋಟಿ ರೂ. ಹಗರಣವಾಗಿದೆ ಎಂದು ಆರೋಪಿಸಿದ್ದೀರಿ ಎಂದು ಶಾಸಕ ವಿ.ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.
ಪರಶುರಾಮ ಥೀಂ ಪಾರ್ಕ್ ನಲ್ಲಿ ಅವ್ಯವಹಾರ ನಡೆದಿದೆ ಎಂದು ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ನಾಯಕರು ಸುಳ್ಳು ಕಥೆ ಕಟ್ಟುತ್ತಲೇ ಇದ್ದಾರೆ. ಇವರಿಗೆ ಸತ್ಯ ಬಹಿರಂಗವಾಗುವುದು ಬೇಕಿಲ್ಲ, ಪ್ರವಾಸೋದ್ಯಮ ಅಭಿವೃದ್ಧಿಯಾಗುವುದು ಬೇಕಿಲ್ಲ. ನಿರಂತರ ಆರೋಪ ನಡೆಸಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಉದ್ದೇಶ ಮಾತ್ರವಿದೆ.
ಪ್ರತಿ ಬಾರಿಯೂ ಅಧಿವೇಶನ ಸಂದರ್ಭದಲ್ಲಿ ಥೀಂ ಪಾರ್ಕ್ ಬಗ್ಗೆ ಅಪಪ್ರಚಾರ ನಡೆಸುವುದು ಈ ಸರ್ಕಾರಕ್ಕೆ ಹಾಗೂ ಕಾರ್ಕಳ ಕಾಂಗ್ರೆಸ್ ಮುಖಂಡರಿಗೆ ಚಟವಾಗಿಬಿಟ್ಟಿದೆ.
ಕಳೆದ ಅಧೀವೇಶನದ ಸಮಯದಲ್ಲಿ ತನಿಖೆ ನಡೆಸುತ್ತೇವೆ ಎಂದರು. ಸಿಐಡಿ ತನಿಖೆಗೂ ಸೂಚಿಸಿದರು. ಆದರೆ ಇದುವರೆಗೆ ತನಿಖೆ ಪ್ರಗತಿಯಾಗಿಲ್ಲ. ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಿ ಎಂದು ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ ಚುನಾವಣೆ ನೀತಿ ಸಂಹಿತೆಯ ನೆಪ ಹೇಳಿ ತಪ್ಪಿಸಿಕೊಂಡು ಈಗ ಬಿಜೆಪಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ
ಈಗ ಮುಡಾದಲ್ಲಿ ಭೂಮಿ ನುಂಗಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಹೈಕಮಾಂಡ್ ಭಂಡಾರ ತುಂಬಿ ಸಿದ್ದರಾಮಯ್ಯ ಸಿಕ್ಕಿ ಹಾಕಿಕೊಂಡಿದ್ದಾರೆ. ಹೀಗಾಗಿ ಮತ್ತೆ ಪರಶುರಾಮ ಥೀಮ್ ಪಾರ್ಕ್ ನೆನಪಾಗಿದೆ. ನಿಮ್ಮನ್ನೆಲ್ಲ ಬಲಿ ಹಾಕುತ್ತೇನೆ ಎಂದು ಸದನದಲ್ಲಿ ತೊಡೆ ತಟ್ಟಿದಷ್ಟೇ ದಮ್ಮು- ತಾಕತ್ತು ನಿಜಕ್ಕೂ ಇದ್ದರೆ ಮೊದಲು ನ್ಯಾಯಸಮ್ಮತ ತನಿಖೆ ನಡೆಸಿ, ಬೇಕಾದರೆ ಸಿಬಿಐ ತನಿಖೆಗೂ ಆದೇಶಿಸಿ. ಎಸ್‌ಐಟಿ ರಚನೆ ಮಾಡಿದರೂ ನೋ ಪ್ರಾಬ್ಲೆಮ್! ಅದನ್ನು ಬಿಟ್ಟು ಅಪಪ್ರಚಾರದ ತುತ್ತೂರಿ ಊದುತ್ತಾ ಹೋದರೆ ನಮ್ಮ ತಿರುಗೇಟು ತಾಳುವುದಕ್ಕೂ ಸಿದ್ದರಾಗಿ ಎಂದು ಸವಾಲು ಹಾಕಿದ್ದಾರೆ.