ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಒಕ್ಕಲಿಗ ಸ್ವಾಮೀಜಿಯೊಬ್ಬರು ವೇದಿಕೆ ಮೇಲೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನವನ್ನು ಡಿಕೆ ಶಿವಕುಮಾರ್ ಅವರಿಗೆ ಬಿಟ್ಟುಕೊಡಿ ಎಂದು ನೇರವಾಗಿ ಮನವಿ ಮಾಡಿರುವ ಘಟನೆ ಗುರುವಾರ ನಡೆದಿದ್ದು, ಇಷ್ಟು ಅವಮಾನ ಆದಮೇಲೂ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯಬಾರದು ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಹೇಳಿದ್ದಾರೆ.
ಡಿಕೆ ಶಿವಕುಮಾರ್ಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂಬ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರ ಶ್ರೀ ಹೇಳಿಕೆಗೆ ಪ್ರತಿಕ್ರಿಯಿಸಿದ ಆರ್ ಅಶೋಕ್, ಸ್ವಾಮೀಜಿಗಳೇ ಸ್ವಪ್ರೇರಣೆಯಿಂದ ಹೇಳಿದರೋ ಅಥವಾ ಡಿಕೆ ಶಿವಕುಮಾರ್ ಹೇಳಿಸಿದರೋ ಎಂಬುದು ಗೊತ್ತಿಲ್ಲ. ಆದರೆ ಸಿದ್ದರಾಮಯ್ಯ ಅವರಿಗೆ ರಾಜಕೀಯದ ಒಳಗೆ ಹೋಗಿ ತಿಳಿದುಕೊಳ್ಳುವ ಸಾಮರ್ಥ್ಯ ಇದೆ ಎಂದರು.
ಒಂದು ಸರ್ಕಾರಿ ಕಾರ್ಯಕ್ರಮದಲ್ಲಿ ಈ ರೀತಿ ಎಂದು ಆಗಿರಲಿಲ್ಲ. ಮೊದಲ ಬಾರಿಗೆ ಸಿಎಂ ಎದುರಿಗೆ ನೀವು ರಾಜೀನಾಮೆ ನೀಡಿ ಎಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಧರ್ಮಾರ್ಥನಾದರೆ ರಾಜೀನಾಮೆ ನೀಡಲಿ. ಇಷ್ಟು ಅವಮಾನ ಆಗಿಯೂ ಸಿಎಂ ಆಗಿ ಮುಂದುವರಿಯಬಾರದು ಎಂದರು. ಸಿದ್ದರಾಮಯ್ಯ ತಂತ್ರಕ್ಕೆ ಇದೊಂದು ಪ್ರತಿತಂತ್ರ ಅಷ್ಟೇ. ಡಿಕೆ ಶಿವಕುಮಾರ್ಗೆ ಅವರ ತಮ್ಮನ ಸೋಲನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇನ್ನು ಮೂರು ಡಿಸಿಎಂಗಳಿಗೆ ಹಿನ್ನೆಲೆ ಗಾಯಕರೇ ಸಿದ್ದರಾಮಯ್ಯ. ಅದಕ್ಕೆ ಕೌಂಟರ್ ಆಗಿ ಧರ್ಮರಾಯ ಆದರೆ ಅಧಿಕಾರ ಬಿಟ್ಟುಕೊಡಬೇಕು ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ಇಂದು ನಾಡಪ್ರಭು ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಅವರು, ರಾಜ್ಯದಲ್ಲಿ ಹಲವರು ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರ ಇನ್ನೂ ಆ ಭಾಗ್ಯ ಸಿಕ್ಕಿಲ್ಲ. ಹಾಗಾಗಿ ಸಿಎಂ ಸಿದ್ದರಾಮಯ್ಯನವರೇ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂದು ಮನವಿ ಮಾಡಿದರು.