ಬೆಂಗಳೂರು:ವರುಣಾ ಕ್ಷೇತ್ರದಲ್ಲಿ 60 ಸಾವಿರ ಮತ ಲೀಡ್ ನೀಡದೇ ಇದ್ದರೆ ತಾವು ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಮತದಾರರ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಡಿಕೊಂಡಿದ್ದಾರೆ.ಸಿದ್ದರಾಮಯ್ಯ ಅವರಿಗೆ ಈಗಲೇ ಅಧಿಕಾರ ಕಳೆದುಕೊಳ್ಳುವ ಭಯ ಆವರಿಸಿದ್ದು ಇದರಿಂದ ವಿಚಲಿತರಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ಸುನಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾನು ಸ್ಪರ್ಧಿಸಿದ್ದ ಸ್ವಕ್ಷೇತ್ರ ವರುಣಾದ ಜನರ ಮುಂದೆ ಜನಪ್ರತಿನಿಧಿ ಹೆಚ್ಚಿನ ಮತ ಕೊಡಿ ಎನ್ನುವುದು ತಪ್ಪಲ್ಲ. ಆದರೆ ಸಿದ್ದರಾಮಯ್ಯ ತನಗೆ ಅಧಿಕಾರ ಕೈ ತಪ್ಪುವುದು ನಿಶ್ಚಿತ ಎನ್ನುವ ಭಯವನ್ನು ವ್ಯಕ್ತಪಡಿಸಿದ್ದಾರೆ. ಸ್ಪಷ್ಟ ಬಹುಮತದ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾರ ಭಯಕ್ಕೆ ಈ ಮಾತು ಹೇಳಿದ್ದಾರೆಂಬುದು ಕರ್ನಾಟಕದ ಜನತೆ ಗೊತ್ತಾಗಬೇಕು.
ಸಿದ್ದರಾಮಯ್ಯ ನವರೇ ನಿಮಗೆ ಯಾರ ಭಯ ? ಹೈಕಮಾಂಡ್ ಭಯವೇ ಅಥವಾ ಡಿ.ಕೆ.ಶಿವಕುಮಾರ್ ಅವರದ್ದೋ ? ಅಥವಾ ಶಾಸಕರದ್ದೋ ?
ನಿಮಗೆ ನಿಮ್ಮ ಅಧಿಕಾರದ ಬಗ್ಗೆಯೇ ಗ್ಯಾರಂಟಿ ಇಲ್ಲ, ಇನ್ನು ಜನತೆಗೆ ಯಾವ ಗ್ಯಾರಂಟಿ ಕೊಡುತ್ತೀರಿ ? ನಾಡಿಗೆ ಸ್ಪಷ್ಟಪಡಿಸಬೇಕೆಂದು ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.