ಶಿವಮೊಗ್ಗ: ಕಳೆದ ಆರು ದಶಕಗಳಿಂದ ಜಾತಕ ಪಕ್ಷಿಯಂತೆ ಕಾದಿರುವ ಜನರ ಕನಸು ಇದೀಗ ನನಸಾಗಿದೆ.ಶರಾವತಿ ನದಿಯ ಹಿನ್ನೀರಿನಲ್ಲಿ ನಿರ್ಮಿಸಲಾಗಿರುವ ಬಹುನಿರೀಕ್ಷಿತ ಸಿಗಂದೂರು ಸೇತುವೆ ಇದೀಗ ಲೋಕಾರ್ಪಣೆಗೆ ಸಿದ್ಧವಾಗಿದೆ.
ಸಿಗಂದೂರು ಸೇತುವೆಗಾಗಿ ಸಾಗರ ತಾಲೂಕಿನ ಶರಾವತಿಯ ಹಿನ್ನೀರಿನ 40ಕ್ಕೂ ಹೆಚ್ಚು ಗ್ರಾಮಸ್ಥರು 60 ವರ್ಷಗಳಿಂದ ಕಾಯುತ್ತಿದ್ದರು. ಸಾಗರ ತಾಲೂಕಿನ ತುಮರಿ ಗ್ರಾ.ಪಂ.ನ ಅನೇಕ ಹಳ್ಳಿಗಳಿಗೆ ಸೇತುವೆ ಇಲ್ಲದೆ ಸಂಪರ್ಕಕ್ಕೆ ಲಾಂಚ್ ಗಳೇ ಆಧಾರವಾಗಿದ್ದವು . ಹಗಲಿನಲ್ಲಿ ಮಾತ್ರ ಲಾಂಚ್ ಗಳು ಕಾರ್ಯನಿರ್ವಹಿಸುತ್ತಿದ್ದು, ಸಂಜೆಯ ಬಳಿಕ ತುರ್ತು ಪರಿಸ್ಥಿತಿ ಬಂದರೆ ಸುತ್ತು ಬೆಳೆಸಿ ಗ್ರಾಮಸ್ಥರು ಸಾಗರಕ್ಕೆ ಬರಬೇಕಿತ್ತು. ಇದೀಗ ಕೊನೆಗೂ ಗ್ರಾಮಸ್ಥರ ಕನಸು ಈಡೇರಿದೆ.
ಸಾಗರ ತಾಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಗೆ 2018 ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೇ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಅವರೇ ಲೋಕಾರ್ಪಣೆ ಮಾಡುತ್ತಿರುವುದು ವಿಶೇಷ. ನಾಳೆ ಅಂದರೆ ಜುಲೈ.14 ರಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಸಿಗಂದೂರಿನಲ್ಲಿ ಸೇತುವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಸುಮಾರು 423 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸೇತುವೆಯು, ಕರ್ನಾಟಕದ ಅತಿ ಉದ್ದದ ಒಳನಾಡು ಕೇಬಲ್-ಸ್ಟೇಯ್ಡ್ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು 2.25 ಕಿಲೋಮೀಟರ್ ಉದ್ದದ ಈ ಸೇತುವೆ ಶರಾವತಿ ನದಿಯ ಭೋರ್ಗರೆವ ಪ್ರವಾಹವನ್ನು ತಡೆದುಕೊಳ್ಳುವ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದು ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳ ನಡುವಿನ ಪ್ರಮುಖ ಸಂಪರ್ಕ ಕೊಂಡಿ ಕೂಡ ಆಗಲಿದೆ.