ಹೆಬ್ರಿ: ತಾಲೂಕಿನ ನಾಡ್ಪಾಲು ಗ್ರಾಮದ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ಅನೇಕ ದಿನಗಳಿಂದ ಒಂಟಿ ಸಲಗ ಬೀಡು ಬಿಟ್ಟು ಜನರಿಗೆ ಜೀವ ಭಯ ಉಂಟುಮಾಡಿದ್ದು, ಸಾರ್ವಜನಿಕರು ಭಯದಿಂದ ಓಡಾಡುವಂತಾಗಿದೆ. ಅದರಲ್ಲೂ ಪುಟ್ಟ ಮಕ್ಕಳು ದಿನನಿತ್ಯ ಶಾಲೆಗೆ ಹೋಗಬೇಕಾಗಿದ್ದು, ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಹೆಬ್ರಿ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಗೌರವ್ ಎಸ್. ಎಂ.ರವರು ಜೀಪ್ ವ್ಯವಸ್ಥೆ ಮಾಡಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಈ ವ್ಯಾಪ್ತಿಯ ಮಕ್ಕಳಿಗೆ ಶಾಲೆಗೆ ಹೋಗಲು ಸಮಸ್ಯೆಯಾಗುತ್ತಿರುವ ಕುರಿತು ಹೆಬ್ರಿ ವನ್ಯಜೀವಿ ವಲಯ ಅರಣ್ಯಾಧಿಕಾರಿ ಗೌರವ್ ಎಸ್.ಎಂ. ಅವರು ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿ ಸಿಸಿಎಫ್ ಕರಿಕಾಳನ್, ಡಿಸಿಎಫ್ ಶಿವರಾಮ ಬಾಬು, ಎಸಿಎಫ್ ಪ್ರಕಾಶ್ ಪೂಜಾರಿ, ಆರ್ಎಫ್ಒ ಗೌರವ್ ಎಸ್.ಎಂ., ಡಿಆರ್ಎಫ್ಒ ಜುನೈದ್ ಅಬ್ದ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಜೀಪ್ ವ್ಯವಸ್ಥೆ ಮಾಡಲಾಗಿದೆ. ಇಲಾಖೆಯ ಈ ಕಾರ್ಯಕ್ಕೆ ಗ್ರಾಮಸ್ಥರು ಶ್ಲಾಘಿಸಿದ್ದಾರೆ.
ದಿನಕ್ಕೆ ಎಂಟು ಟ್ರಿಪ್:
ಅರಣ್ಯ ಇಲಾಖೆ ಜೀಪು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಬರಲು ದಿನಕ್ಕೆ ಎಂಟು ಟ್ರಿಪ್ ಹೊಡೆಯಬೇಕಾಗುತ್ತದೆ. ಶಾಲೆ ಹೋಗುವ ವಿದ್ಯಾರ್ಥಿಗಳಿಗೆ ಬೆಳಗ್ಗೆ ಬೇಗ ಟ್ರಿಪ್ ಮಾಡಿ, ನೆಲ್ಲಿಕಟ್ಟೆಯ ತನಕ ವಿದ್ಯಾರ್ಥಿಗಳನ್ನು ಬಸ್ಸಿಗೆ ತಲುಪಿಸಲಾಗುತ್ತದೆ. ಮೇಗದ್ದೆ, ವಣಜಾರು, ಕೂಡ್ಲು, ಕೆದ್ಭುಮಕ್ಕಿ, ಬೆಳಾರ್ ಕಡೆಯಿಂದ 15 ವಿದ್ಯಾರ್ಥಿಗಳು ದಿನನಿತ್ಯ ಜೀಪಿನಲ್ಲಿ ಸಂಚರಿಸುತ್ತಾರೆ.
ಈ ಮಧ್ಯೆ ಆನೆ ಓಡಿಸಬೇಕೆಂದು ಊರಿನ ಗ್ರಾಮಸ್ಥರೆಲ್ಲರೂ ಬೃಹತ್ ಮಟ್ಟದ ಪ್ರತಿಭಟನೆ ಕೂಡ ನಡೆಸಿದ್ದರು.
ಗ್ರಾಮಸ್ಥರಿಗೆ ನಮ್ಮ ಇಲಾಖೆಯ ಸಹಕಾರ ಯಾವಾಗಲೂ ಇರುತ್ತದೆ. ಆನೆ ದಾಳಿ ಭಯದಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಭಯಪಡುತ್ತಿರುವಾಗ, ನನ್ನ ಮನವಿಯಂತೆ ಮೇಲಧಿಕಾರಿಗಳು ಮಕ್ಕಳು ಶಾಲೆಗೆ ಹೋಗಿ ಬರಲು ಜೀಪ್ ವ್ಯವಸ್ಥೆ ಮಾಡಿದ್ದು ಯಾರು ಧೃತಿಗೆಡಬೇಕಾಗಿಲ್ಲ ಎಂದು ಹೆಬ್ರಿ ವನ್ಯಜೀವಿ ವಿಭಾಗದ ಆರ್ ಎಫ್ ಒ. ಗೌರವ್ ಎಂ.ಎಸ್. ಹೇಳಿದ್ದಾರೆ.
